ADVERTISEMENT

ಸಾಧನೆಯಿಂದ ಗುರುತಿಸಿಕೊಳ್ಳಲು ಪ್ರಯತ್ನಿಸಿ: ಸಿಇಒ ಶಿಲ್ಪಾ

ಮಹಿಳೆಯರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 13:47 IST
Last Updated 24 ಸೆಪ್ಟೆಂಬರ್ 2022, 13:47 IST
ಬೀದರ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಹಿಳಾ ಘಟಕದ ಉದ್ಘಾಟನೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕಿ ನಾಗವೇಣಿ ಶಂಕರ ಅವರಿಗೆ ‘ಪ್ರಜಾವಾಣಿ’ ವತಿಯಿಂದ ಸಾಧಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬೀದರ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಹಿಳಾ ಘಟಕದ ಉದ್ಘಾಟನೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕಿ ನಾಗವೇಣಿ ಶಂಕರ ಅವರಿಗೆ ‘ಪ್ರಜಾವಾಣಿ’ ವತಿಯಿಂದ ಸಾಧಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬೀದರ್‌: ‘ಹಿಂದೆ ಇದ್ದ ಸಾಮಾಜಿಕ ಕಟ್ಟಳೆಗಳು ಈಗ ಇಲ್ಲ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಲು ಮಹಿಳೆಯರಿಗೆ ಮುಕ್ತ ಅವಕಾಶ ಇದೆ. ಮಹಿಳೆಯರು ಅದರ ಪೂರ್ಣ ಸದುಪಯೋಗ ಪಡೆಯಬೇಕು. ಸಾಧನೆ ಮೂಲಕ ಸಮಾಜದಲ್ಲಿ ಛಾಪು ಮೂಡಿಸಲು ಪ್ರಯತ್ನಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ ಹೇಳಿದರು.

ನಗರದ ಬಸವ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಹಿಳಾ ಘಟಕದ ಉದ್ಘಾಟನೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಗುರುತಿಸಿಕೊಂಡಿದ್ದಾರೆ. ಸಾಧನೆಗಳನ್ನೂ ಮಾಡುತ್ತಿದ್ದಾರೆ. ಸಮಾಜ ಮುಕ್ತ ಅವಕಾಶ ಕೊಟ್ಟಿರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಯಾವುದೇ ಹಿಂಜರಿಕೆ ಬೇಡ’ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.

ADVERTISEMENT

‘ಧರ್ಮ ಹಾಗೂ ಸಾಮಾಜಿಕ ಕಟ್ಟುಪಾಡಿನ ಮೂಲಕ ಹಿಂದಿನ ಕಾಲದಲ್ಲಿ ಮಹಿಳೆಯರನ್ನು ನಿಯಂತ್ರಿಸಲಾಗುತ್ತಿತ್ತು. ಮಹಿಳೆಯರಿಗೆ ಸಾಂವಿಧಾನಿಕ ಹಕ್ಕುಗಳು ದೊರಕಿದ ನಂತರ ಕಟ್ಟಳೆಗಳಿಗೆ ಕಡಿವಾಣ ಬಿದ್ದಿದೆ. ಹಿಂದೆ ಮಹಿಳೆಯರು ಅನುಭವಿಸಿದ ಕಷ್ಟಗಳನ್ನು ಪುಸ್ತಕಗಳ ಮೂಲಕ ಓದಿ ತಿಳಿದುಕೊಂಡಿದ್ದೇವೆ. ಅಂತಹ ಕಷ್ಟಗಳನ್ನು ಇಂದು ಯಾರೊಬ್ಬರೂ ಅನುಭವಿಸಿಲ್ಲ ಎಂದು ನಾನು ಭಾವಿಸಿದ್ದೇನೆ’ ಎಂದರು.

‘ನಾನು ಶಿಕ್ಷಣದ ಮೂಲಕವೇ ಅಧಿಕಾರಿಯಾಗಲು ಸಾಧ್ಯವಾಗಿದೆ. ನನ್ನ ಬದುಕಿನ ಅವಧಿಯಲ್ಲಿ ಲಿಂಗ ಅಸಮಾನತೆ ಕಂಡು ಬಂದಿಲ್ಲ. ಸಾಹಿತ್ಯದ ಅರಿವೂ ಇದ್ದರೂ, ಶರಣ ಸಾಹಿತ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿದೆ. ಓದು, ಬರಹ ಬಂದರೆ ಸಾಲದು. ಅದನ್ನು ಸಾಧನೆಗೆ ಏಣಿಯಾಗಿ ಬಳಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.


ಸಾಹಿತಿ ಭಾರತಿ ವಸ್ತ್ರದ್ ಮಾತನಾಡಿ, ‘ಆಡಳಿತ ವ್ಯವಸ್ಥೆಯಲ್ಲಿ ಮಹಿಳೆ ಸ್ವತಂತ್ರವಾಗಿ ಅಧಿಕಾರ ಚಲಾಯಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾಳೆ. ಅನೇಕ ಮಹಿಳಾ ಐಎಎಸ್, ಐಪಿಎಸ್‌ ಅಧಿಕಾರಿಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಹೋಗಿದ್ದಾರೆ. ಅವರೆಲ್ಲ ನಮಗೆ ಪ್ರೇರಣೆಯಾಗಿದ್ದಾರೆ’ ಎಂದರು.


ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಜಯದೇವಿ ಯದಲಾಪೂರೆ ಮಾತನಾಡಿ, ‘ಶಿಕ್ಷಕನಿಂದಾಗಿಯೇ ಒಬ್ಬ ವ್ಯಕ್ತಿ ಮೂರ್ತ ಸ್ವರೂಪ ಪಡೆದುಕೊಳ್ಳುತ್ತಾನೆ. ಅಸಾಮಾನ್ಯ ವ್ಯಕ್ತಿತ್ವದ ಶಿಕ್ಷಕರು ಇಂದು ರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರ ಸೇವೆ ನಮಗೆಲ್ಲ ಮಾರ್ಗದರ್ಶಿಯಾಗಿದೆ’ ಎಂದು ಹೇಳಿದರು.

ಖಾನಾವಳಿಯಲ್ಲಿ ರೊಟ್ಟಿ ಮಾಡಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ನಡೆಸುತ್ತಿರುವ ಬೀದರ್‌ ತಾಲ್ಲೂಕಿನ ಕೊಳಾರ ಗ್ರಾಮದ ನಾಗವೇಣಿ ಶಂಕರ ಅವರಿಗೆ ‘ಪ್ರಜಾವಾಣಿ ಸಾಧಕಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಜಿಲ್ಲಾ ಘಟಕದ ವತಿಯಿಂದಲೂ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪ್ರಜಾವಾಣಿಯ ಜಿಲ್ಲಾ ಹಿರಿಯ ವರದಿಗಾರ ಚಂದ್ರಕಾಂತ ಮಸಾನಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ಬಸವ ಕೇಂದ್ರದ ಮಹಿಳಾ ಘಟಕದ ಅಧ್ಯಕ್ಷೆ ಪ್ರೊ.ವಿದ್ಯಾವತಿ ಬಲ್ಲೂರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್‌. ಮನೋಹರ, ತಾಲ್ಲೂಕು ಘಟಕದ ಕೋಶಾಧ್ಯಕ್ಷತೆ ಮಹಾನಂದಾ ಪಾಟೀಲ ಇದ್ದರು. ಕಸಾಪ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಸ್ವರೂಪರಾಣಿ ನಾಗೂರೆ ಸ್ವಾಗತಿಸಿದರು. ಜಿಲ್ಲಾ ಪ್ರತಿನಿಧಿ ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶ್ರೇಯಾ ಮಹೀಂದ್ರಕರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.