ಬೀದರ್: ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಪರೇಡ್ ಕಾರ್ಯಕ್ರಮಕ್ಕೆ ಜಿಲ್ಲೆಯ ಇಬ್ಬರಿಗೆ ವಿಶೇಷ ಆಹ್ವಾನ ದೊರೆತಿದೆ.
ಇಲ್ಲಿನ ಶಿವನಗರದ ನಿವಾಸಿ, ವನ್ಯಜೀವಿ ಛಾಯಾಗ್ರಾಹಕ ವಿವೇಕಾನಂದ ಬಿ. ಹಾಗೂ ತಾಲ್ಲೂಕಿನ ಶ್ರೀಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ವಿಶ್ವನಾಥ ಅವರು ವಿಶೇಷ ಅತಿಥಿಗಳಾಗಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈಗಾಗಲೇ ಈ ಇಬ್ಬರ ಹೆಸರುಗಳು ಅಂತಿಮಗೊಂಡಿದ್ದು, ಇಬ್ಬರಿಗೂ ಮಾಹಿತಿ ನೀಡಲಾಗಿದೆ. ನವದೆಹಲಿಗೆ ಕರೆದೊಯ್ಯಲು ಅಗತ್ಯ ಸಿದ್ಧತೆ ಕೂಡ ನಡೆದಿದೆ.
ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ನವದೆಹಲಿಗೆ ಆಹ್ವಾನಿಸುವ ಪರಂಪರೆ ಇದೆ. ಆದರೆ, ಈ ಸಲ ಜಿಲ್ಲೆಯ ಇಬ್ಬರನ್ನು ಅತಿಥಿಗಳಾಗಿ ಆಯ್ಕೆ ಮಾಡಿ, ಆಹ್ವಾನಿಸಿರುವುದು ವಿಶೇಷ.
30 ವರ್ಷ ವಯಸ್ಸಿನ ವನ್ಯಜೀವಿ ಛಾಯಾಗ್ರಹಣದ ಮೂಲಕ ಗಮನ ಸೆಳೆದಿರುವ ವಿವೇಕಾನಂದ ಅವರು ಆಯ್ಕೆಯಾಗಿರುವುದು ವಿಶೇಷ. ಸದ್ಯ ಅರಣ್ಯ ಇಲಾಖೆಯಲ್ಲಿ ನ್ಯಾಚುರಲಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2008ರಿಂದ ಫೋಟೋಗ್ರಫಿ ಮಾಡುತ್ತಿದ್ದಾರೆ. ದೇಶದಲ್ಲಿ ಅಳಿವಿನಂಚಿನ ಕರಿ ನವಿಲು ಬೀದರ್ ತಾಲ್ಲೂಕಿನ ಚೊಂಡಿ ಅರಣ್ಯದಲ್ಲಿ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಗಮನ ಸೆಳೆದವರು ವಿವೇಕಾನಂದ. ಸದ್ಯ ದೇಶದ ಐದು ರಾಜ್ಯಗಳಲ್ಲಷ್ಟೇ ಕರಿ ನವಿಲುಗಳಿದ್ದು, ಇವುಗಳ ಸಂಖ್ಯೆ 200ರ ಆಸುಪಾಸಿನಲ್ಲಿದೆ. ಕರ್ನಾಟಕದಲ್ಲಿ, ಅದರಲ್ಲೂ ಗಡಿ ಜಿಲ್ಲೆ ಬೀದರ್‌ನಲ್ಲಿ ಈ ಜಾತಿಯ ನವಿಲುಗಳಿವೆ ಎಂದು ಇಡೀ ದೇಶಕ್ಕೆ ಪರಿಚಯಿಸಿದ ಕೀರ್ತಿ ವಿವೇಕಾನಂದ ಅವರದ್ದು.
ವಿಶ್ವ ಗುಬ್ಬಿ ದಿನ, ಪಕ್ಷಿ ದಿನ ಸೇರಿದಂತೆ ವನ್ಯಜೀವಿ, ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾಯಕ ಮಾಡುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿರುವ ಅಪರೂಪದ ವನ್ಯಜೀವಿಗಳ ಛಾಯಾಚಿತ್ರಗಳನ್ನು ತೆಗೆದು, ಅವುಗಳ ಸಂಪೂರ್ಣ ಮಾಹಿತಿಯೊಂದಿಗೆ ಮಕ್ಕಳು, ಯುವಜನರಿಗೆ ತಿಳಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಶ್ರೀಮಂಡಲ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಮೂಲಸೌಕರ್ಯ ಕಲ್ಪಿಸಿ, ಮಾದರಿ ಗ್ರಾಮ ಪಂಚಾಯಿತಿ ಎಂಬ ಹಿರಿಮೆಗೆ ಪಾತ್ರವಾಗಿರುವುದಕ್ಕೆ ಪಂಚಾಯಿತಿ ಅಧ್ಯಕ್ಷ ಮಂಜುನಾಥ ವಿಶ್ವನಾಥ ಅವರನ್ನು ಅತಿಥಿಯಾಗಿ ಆಯ್ಕೆ ಮಾಡಲಾಗಿದೆ. ಮಂಜುನಾಥ ಅವರು ಡಿಪ್ಲೊಮಾ ಮೆಕ್ಯಾನಿಕಲ್ ಪದವೀಧರರು. ಅವರು ಪಂಚಾಯಿತಿ ಅಧ್ಯಕ್ಷರಾದ ನಂತರ ನರೇಗಾ ಕಾಯಕ ಮಿತ್ರರಿಗೆ ಉತ್ತಮ ತರಬೇತಿ, ಎಲ್ಲ ಸರ್ಕಾರಿ ಸೇವೆಗಳನ್ನು ಸಕಾಲಕ್ಕೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉಚಿತವಾಗಿ ಪುಸ್ತಕ ವಿತರಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಕಂಗಟಿ, ನವಲಾಸಪೂರ, ನೇಮತಾಬಾದ್ ಹಾಗೂ ಅಲ್ಲಾಪುರ ಗ್ರಾಮಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಶ್ರಮಿಸಿದ್ದಾರೆ.
ಗಣರಾಜ್ಯೋತ್ಸವ ಪರೇಡ್‌ಗೆ ನನ್ನನ್ನು ಜಿಲ್ಲೆಯಿಂದ ಅತಿಥಿಯಾಗಿ ಆಹ್ವಾನಿಸಿರುವುದು ಬಹಳ ಖುಷಿ ತಂದಿದೆ. ಹೆಮ್ಮೆಯ ವಿಷಯ.ವಿವೇಕಾನಂದ ವನ್ಯಜೀವಿ ಛಾಯಾಗ್ರಾಹಕ
ಪಂಚಾಯಿತಿಯ ಪ್ರತಿಯೊಬ್ಬರ ಶ್ರಮದಿಂದ ನಮ್ಮ ಪಂಚಾಯಿತಿ ಮಾದರಿ ಅನಿಸಿಕೊಂಡಿದೆ. ಇದು ನನಗಲ್ಲ ಎಲ್ಲರಿಗೂ ಸಿಕ್ಕ ಗೌರವ.ಮಂಜುನಾಥ ವಿಶ್ವನಾಥ ಅಧ್ಯಕ್ಷ ಶ್ರೀಮಂಡಲ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.