ADVERTISEMENT

ಬೀದರ್ | ಅವೈಜ್ಞಾನಿಕ ಬ್ಯಾರಿಕೇಡ್‌ನಿಂದ ಹೆಚ್ಚಿದ ಅಪಘಾತ: ಬೈಕ್‌ ಸವಾರರಿಗೆ ಕಂಟಕ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಫೆಬ್ರುವರಿ 2026, 5:22 IST
Last Updated 17 ಫೆಬ್ರುವರಿ 2026, 5:22 IST
ಬೀದರ್‌ನ ಮಹಾವೀರ ವೃತ್ತದಲ್ಲಿ ಬ್ಯಾರಿಕೇಡ್‌ ಹಾಳಾಗಿ, ಅಪಾಯಕ್ಕೆ ಆಹ್ವಾನಿಸುತ್ತಿದೆ
ಬೀದರ್‌ನ ಮಹಾವೀರ ವೃತ್ತದಲ್ಲಿ ಬ್ಯಾರಿಕೇಡ್‌ ಹಾಳಾಗಿ, ಅಪಾಯಕ್ಕೆ ಆಹ್ವಾನಿಸುತ್ತಿದೆ   

ಬೀದರ್‌: ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಪೊಲೀಸರು ಅಳವಡಿಸಿರುವ ಅವೈಜ್ಞಾನಿಕ ಬ್ಯಾರಿಕೇಡ್‌ಗಳಿಂದ ಅಪಘಾತಗಳು ಹೆಚ್ಚಾಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ನಗರದ ಬಸವೇಶ್ವರ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಹಾವೀರ ವೃತ್ತ ಸೇರಿದಂತೆ ಇತರೆ ಕಡೆಗಳ ರಸ್ತೆಗಳಲ್ಲಿ ಶಾಶ್ವತವಾಗಿ ಲೋಹದ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸಿಗ್ನಲ್‌ ಬಿದ್ದಾಗ ಎಡಬದಿಯಿದ ಒಂದೇ ಸಾಲಿನಲ್ಲಿ ಯಾವುದೇ ಅಡೆತಡೆಯಿಲ್ಲದೇ ವಾಹನಗಳು ಸುಗಮವಾಗಿ ಸಂಚರಿಸಲೆಂಬ ಉದ್ದೇಶದಿಂದ ಈ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆದರೆ, ಇವುಗಳಲ್ಲಿ ಹೆಚ್ಚಿನವು ತುಕ್ಕು ಹಿಡಿದು ವಾಲಿವೆ. ಮಳೆ, ಗಾಳಿಗೆ ಇವುಗಳ ಬಣ್ಣ ಮಂಕಾಗಿದ್ದು, ರಾತ್ರಿ ವೇಳೆ ಗೋಚರಿಸುವುದಿಲ್ಲ. ಇದರ ಪರಿಣಾಮ ವಾಹನಗಳು ಇವುಗಳಿಗೆ ಗುದ್ದುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

ಅತಿ ವೇಗದಲ್ಲಿ ಸಂಚರಿಸುವ ಬೈಕ್‌ ಸವಾರರು ಇತರೆ ವಾಹನಗಳನ್ನು ತಪ್ಪಿಸಲು ಹೋಗಿ ಅವುಗಳಿಗೆ ಗುದ್ದಿ, ಅಪಘಾತಗಳಿಗೆ ಒಳಗಾಗುತ್ತಿದ್ದಾರೆ.

ADVERTISEMENT

ಬೀದರ್‌ ನಗರದಲ್ಲಿ ಬಹುತೇಕರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಸಿಗ್ನಲ್‌ ಬಿದ್ದರೂ ಎಡಬದಿಯಿಂದ ಸುಗಮವಾಗಿ ವಾಹನಗಳು ಹೋಗಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಬಲಬದಿಗೆ ಹೋಗುವವರು ಆ ಲೇನ್‌ನಲ್ಲಿ ವಾಹನ ನಿಲ್ಲಿಸುತ್ತಾರೆ. ಇನ್ನು, ಬಲ ಬದಿಗೆ ಹೋಗುವವರು ಎಡಬದಿಗೆ ಹೋಗಿ ಸಿಗ್ನಲ್‌ ಬೀಳುವ ತನಕ ನಿಲ್ಲುತ್ತಾರೆ. ಇದರಿಂದ ಎಡಬದಿಯಿಂದ ಹೋಗುವವರಿಗೆ ಸಮಸ್ಯೆ ಉಂಟಾಗುತ್ತದೆ. ಸಿಗ್ನಲ್‌ ಬಿದ್ದ ಬಳಿಕ ಎಡ ಬದಿ ಹಾಗೂ ಬಲ ಬದಿಯವರು ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿರುವುದರಿಂದ ಅಪಘಾತಗಳು ಸಂಭವಿಸಿ, ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ಈ ಕುರಿತು ಸಂಚಾರ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ. ಆದರೆ, ಜನರಿಗೆ ಇನ್ನೂ ಕೂಡ ಸಂಚಾರ ನಿಯಮಗಳು ಮನದಟ್ಟಾದಂತೆ ಕಾಣಿಸುತ್ತಿಲ್ಲ. ಟ್ರಾಫಿಕ್‌ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಇದರಲ್ಲೂ ಸುಧಾರಣೆ ತರಬಹುದು ಎನ್ನುತ್ತಾರೆ ಸಾರ್ವಜನಿಕರು.

‘ನಾನು ನಿತ್ಯ ಭಗತ್‌ ಸಿಂಗ್‌ ವೃತ್ತದ ಮೂಲಕವೇ ಕಚೇರಿ ಕೆಲಸಕ್ಕೆ ಹಾದು ಹೋಗುತ್ತೇನೆ. ಆದರೆ, ಸಿಗ್ನಲ್‌ನಲ್ಲಿ ಎಡಬದಿಯಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುವುದರಿಂದ ಅದರ ಮೂಲಕ ಹೋಗಲು ಸಮಸ್ಯೆ ಉಂಟಾಗುತ್ತಿದೆ. ಸಂಚಾರ ಪೊಲೀಸರು ಕಟ್ಟುನಿಟ್ಟಾಗಿ ನಿಯಮ ಜಾರಿಗೆ ತರಬೇಕು. ಲೇನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಜನರನ್ನು ಈ ಬಗ್ಗೆ ಹೆಚ್ಚು ಸಾಕ್ಷರರಾಗಿ ಮಾಡಬೇಕು’ ಎನ್ನುತ್ತಾರೆ ಖಾಸಗಿ ಕಂಪನಿಯ ಉದ್ಯೋಗಿ ಪ್ರಶಾಂತ್‌.

‘ರಸ್ತೆಯಲ್ಲಿ ಶಾಶ್ವತವಾಗಿ ಅಳವಡಿಸಿರುವ ಬ್ಯಾರಿಕೇಡ್‌ಗಳು ಅಪಘಾತಕ್ಕೆ ಒಳಗಾಗಿ ವಾಲಿವೆ. ವಾಹನ ಚಾಲಕರಿಗೆ ಬಹಳ ಕಿರಿಕಿರಿ ಉಂಟಾಗುತ್ತಿದೆ. ಅದರಲ್ಲೂ ಬೈಕ್‌ ಸವಾರರಿಗೆ ಇವುಗಳು ಮಾರಕವಾಗಿ ಪರಿಣಮಿಸಿವೆ. ಇವುಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಎಡೆಮಾಡಿಕೊಡಬೇಕು’ ಎನ್ನುತ್ತಾರೆ ಹಾರೂರಗೇರಿಯ ನಿವಾಸಿ ಪ್ರದೀಪ್‌.

ಬಣ್ಣ ಕಳೆದುಕೊಂಡು ವಾಲಿದ ಬ್ಯಾರಿಕೇಡ್‌
ರಸ್ತೆಯ ಎಡಬದಿಯಲ್ಲಿ ವಾಹನಗಳು ಅಡೆತಡೆಯಿಲ್ಲದೇ ಸಂಚರಿಸಲೆಂದು ಬ್ಯಾರಿಕೇಡ್‌ ಹಾಕಲಾಗಿದೆ. ಆದರೂ ಎಡಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಸಂಚಾರ ಅಸ್ತವ್ಯಸ್ತಗೊಳಿಸಲಾಗುತ್ತಿದೆ –ಪ್ರಜಾವಾಣಿ ಚಿತ್ರಗಳು: ಲೋಕೇಶ್‌ ವಿ. ಬಿರಾದಾರ

‘ಮರೆಯಲ್ಲಿ ನಿಲ್ಲದಿರಿ’

ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಓಡಾಡುವವರ ವಿರುದ್ಧ ಟ್ರಾಫಿಕ್‌ ಪೊಲೀಸರು ದಂಡ ಹಾಕುವುದು ಸಹಜ. ಆದರೆ ರಸ್ತೆಬದಿಯಲ್ಲಿ ಮರ ಗಿಡಗಳು ಹಾಗೂ ಇತರೆ ಕಟ್ಟಡಗಳ ಮರೆಯಲ್ಲಿ ನಿಂತು ಏಕಾಏಕಿ ವಾಹನಗಳಿಗೆ ಎದುರಿಗೆ ಬಂದು ತಡೆಯುತ್ತಿರುವುದರ ಪರಿಣಾಮ ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ‘ರಸ್ತೆ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಿದ್ದರೆ ಕೈಗೊಳ್ಳಲಿ. ಅದು ಉತ್ತಮ ಕೆಲಸ. ಆದರೆ ಪ್ರಮುಖ ರಸ್ತೆಗಳಲ್ಲಿ ಎಲ್ಲರಿಗೂ ಗೋಚರಿಸುವಂತೆ ಪೊಲೀಸರು ಕಾಣಲಿ. ಇದರಿಂದ ನಿಯಮ ಉಲ್ಲಂಘಿಸುವವರಿಗೆ ಭಯವಾಗುತ್ತದೆ. ಮರೆಯಲ್ಲಿ ನಿಂತು ಏಕಾಏಕಿ ವಾಹನಗಳೆದುರಿಗೆ ಪೊಲೀಸರು ಬರುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿರುವುದೇ ಸಾಕ್ಷಿ’ ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ಪ್ರದೀಪ್‌ ಪ್ರಶಾಂತ್‌.

‘ಯೂ ಟರ್ನ್‌’ ಫಲಕಗಳು ಹೆಚ್ಚಲಿ

ನಗರದ ಪ್ರಮುಖ ರಸ್ತೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಯೂ ಟರ್ನ್‌ ಫಲಕಗಳಿಲ್ಲ. ಇದು ಸಹ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ. ಎಲ್ಲಿ ಯೂ ಟರ್ನ್‌ ತೆಗೆದುಕೊಳ್ಳಬೇಕು. ಎಲ್ಲಿ ತೆಗೆದುಕೊಳ್ಳಬಾರದು ಎಂಬ ಗೊಂದಲ ವಾಹನ ಓಡಿಸುವವರಲ್ಲಿದೆ. ಇದರಿಂದ ಕೆಲವರು ಬೇಕಾಬಿಟ್ಟಿಯಾಗಿ ಯೂ ಟರ್ನ್‌ ತೆಗೆದುಕೊಂಡು ವಾಹನ ಚಲಾವಣೆ ಮಾಡಿ ಅಪಘಾತ ಮಾಡಿಕೊಳ್ಳುತ್ತಿದ್ದಾರೆ. ಸಂಚಾರ ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆಯವರು ಜಂಟಿಯಾಗಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ‘ಯೂ ಟರ್ನ್‌’ ಫಲಕಗಳನ್ನು ಅಳವಡಿಸಬೇಕೆನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.