ADVERTISEMENT

ವಚನ-ಕನ್ನಡ ಕಟ್ಟಿದ ಮಹಾನುಭಾವಿ ಹಳಕಟ್ಟಿ: ರಾಜೇಂದ್ರ ಕುಮಾರ

ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 15:28 IST
Last Updated 6 ಜುಲೈ 2022, 15:28 IST
ಬೀದರ್‌ನ ವಿದ್ಯಾನಗರದಲ್ಲಿ ಜಿಲ್ಲಾ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಡಾ. ಫ.ಗು. ಹಳಕಟ್ಟಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಉದ್ಘಾಟಿಸಿದರು
ಬೀದರ್‌ನ ವಿದ್ಯಾನಗರದಲ್ಲಿ ಜಿಲ್ಲಾ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಡಾ. ಫ.ಗು. ಹಳಕಟ್ಟಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಉದ್ಘಾಟಿಸಿದರು   

ಬೀದರ್: ವಚನಗಳು ಸುಂದರ ಬುದಕಿಗೆ ಪ್ರೇರಣೆಯಾಗಿವೆ. ಅವು ಬದುಕಿನ ಬವಣೆ ನೀಗಿಸುತ್ತವೆ. ಜೀವನದ ನೆಲೆಗೆ ಶಕ್ತಿ ಒದಗಿಸುತ್ತವೆ, ಬಸವನ ನೆನೆಯುವುದೇ ಒಂದು ಭಾಗ್ಯ ಎಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.

ಇಲ್ಲಿಯ ವಿದ್ಯಾನಗರದಲ್ಲಿ ಜಿಲ್ಲಾ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ತಿಂಗಳ ಶರಣ ಸಂಗಮ ಹಾಗೂ ಡಾ. ಫ.ಗು. ಹಳಕಟ್ಟಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಫ.ಗು. ಹಳಕಟ್ಟಿ ಬಸವ ತತ್ವದ ಅನಘ್ರ್ಯರತ್ನ. ಅವರಿಲ್ಲದಿದ್ದರೆ ವಚನಗಳು ಬೆಳಕಿಗೆ ಬರುತ್ತಿರಲಿಲ್ಲ. ರಾಜ್ಯ ಸರ್ಕಾರ ಪ್ರತಿವರ್ಷ ವಚನ ಸಂರಕ್ಷಣಾ ದಿನಾಚರಣೆ ಆಚರಿಸಿ ಅವರಿಗೆ ಗೌರವ ಸಲ್ಲಿಸುತ್ತಿದೆ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಸಂತಪುರ ಪ್ರೌಢ ಶಾಲೆಯ ಶಿಕ್ಷಕ ಶಿವಲಿಂಗ ಹೇಡೆ ಮಾತನಾಡಿ, ಪ್ರತಿಯೊಬ್ಬರ ಮನೆಯ ಜಗಲಿ ಮೇಲಿದ್ದ ತಾಡೋಲೆಗಳು ಗುರುತಿಸಿದ ಮಹಾನುಭಾವಿ ಫ.ಗು. ಹಳಕಟ್ಟಿ. ತನ್ನ ಮನೆಯನ್ನು ಮಾರಿ ‘ಹಿತಚಿಂತಕ’ ಮುದ್ರಣಾಲಯ ಪ್ರಾರಂಭಿಸಿ ವಚನ ಶಾಶ್ತ್ರಸಾರ, ಶಿವಾನುಭವ ಶಬ್ಧಕೋಶ ಮುದ್ರಿಸಿ ವಚನ ಗುಮ್ಮಟ ನಿರ್ಮಿಸಿದ ಅಪರೂಪದ ಜೀವ. ಬಸವ-ಕನ್ನಡ ಇಂದಿನ ಚಿಂತನೆಗೆ ಗ್ರಾಸ ಒದಗಿಸಿದ ಮೂಲ ಕಾರಣಿಕ ಡಾ. ಫ.ಗು. ಹಳಕಟ್ಟಿ ಎಂದು ಬಣ್ಣಿಸಿದರು.

ಹರಿಹರನ ರಗಳೆ ಬೆಳಕಿಗೆ ತಂದವರಿವರು. 42 ವಚನಕಾರರನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ತನ್ನೆಲ್ಲವನ್ನು ಬಸವ ಪಾದಕ್ಕೆ ಅರ್ಪಣೆ ಮಾಡಿದ ವಚನ ವಾಂಜ್ಞಯರಿವರು. ಸಾಹಿತ್ಯ, ಭಾಷೆ, 25 ವರ್ಷಗಳ ಶರಣ ವಿಚಾರಗಳ ಕ್ರಾಂತಿ ಸಾಹಿತ್ಯ ರೂಪದಲ್ಲಿ ನಮ್ಮೆಲ್ಲರ ಕೈಗೆ ಕೊಟ್ಟಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಆಡಳಿತ ಅಧಿಕಾರಿ ಮಹಾದೇವಪ್ಪ ಉಪ್ಪಿನ ಮಾತನಾಡಿ, ಇಂದು ನಮ್ಮ ಮಧ್ಯೆ ಎಲ್ಲವೂ ಇದೆ. ಆದರೆ ನಮ್ಮಲ್ಲಿ ಅರಿವಿನ ಕೊರತೆ ಎದ್ದು ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮಲ್ಲಿ ವೈಚಾರಿಕ ಕ್ರಾಂತಿ ನೆಲೆಗೊಳ್ಳಬೇಕು. ಹೆಣ್ಣು ಮಕ್ಕಳಿಗೆ ಗೌರವ, ವರದಕ್ಷಿಣೆ ಪಿಡುಗು ಹೋಗಬೇಕು. ಇಂದು ಜಾತಿ ವೈಷಮ್ಯ ನಿಲ್ಲಬೇಕು. ಸಮಾಜದ ಬಂಧುತ್ವ ಅನುಷ್ಠಾನಗೊಳ್ಳುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಬಸವಕೇಂದ್ರ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ನಿವೃತ್ತ ಡೀನ್ ಸುರೇಶ ಪಾಟೀಲ, ನಿವೃತ್ತ ಶಿಕ್ಷಕ ಸಿದ್ಧಾರಡ್ಡಿ ನಾಗೋರಾ, ಅಧಿಕಾರಿ ಮಹೇಶ ಮಾಶೆಟ್ಟಿ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಘ್ನೇಶ್ವರ ಶಿವಯೋಗಿ ಅವರನ್ನು ಗೌರವಿಸಲಾಯಿತು.

ವಚನಶ್ರೀ, ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು. ರಾಜಮ್ಮ ಚಿಕ್ಕಪೇಟ ಪ್ರಾರ್ಥಿಸಿದರು. ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಜಗನ್ನಾಥ ಶಿವಯೋಗಿ ಸ್ವಾಗತಿಸಿದರು. ಗಣೇಶ ಶೀಲವಂತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.