
ಬೀದರ್: ‘ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ ಅನುದಾನ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಆಶ್ವಾಸನೆ ನೀಡಿದ್ದಾರೆ.
ಮಹರ್ಷಿ ವಾಲ್ಮೀಕಿ ಸಮಾಜ ಸಂಘದ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದಾಗ ಮೇಲಿನಂತೆ ಭರವಸೆ ನೀಡಿದರು.
ಜಿಲ್ಲಾಡಳಿತವು ಬೀದರ್ ನಗರದ ಚಿಕ್ಕಪೇಟೆಯ ಸರ್ವೇ ನಂ. 61ರಲ್ಲಿ 20 ಗುಂಟೆ ಜಮೀನು ವಾಲ್ಮೀಕಿ ಸಮುದಾಯ ಭವನಕ್ಕಾಗಿ ಮೀಸಲಿಟ್ಟಿದೆ. ಆದರೆ, ಭವನದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಬಿಡುಗಡೆ ಆಗದೆ ಯೋಜನೆ ಸ್ಥಗಿತಗೊಂಡಿದೆ ಎಂದು ಸಚಿವರ ಗಮನ ಸೆಳೆದರು.
ಜಿಲ್ಲೆಯಲ್ಲಿ ಟೋಕರಿ ಕೋಳಿ, ವಾಲ್ಮೀಕಿ, ಕೋಲಿ, ಮಹಾದೇವ ಕೋಲಿ ಸೇರಿದಂತೆ ಹಲವು ಪದಗಳಲ್ಲಿ ಗುರುತಿಸಿಕೊಂಡಿರುವ ಪರಿಶಿಷ್ಟ ಪಂಗಡದವರ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಮದುವೆ, ಸಾಂಸ್ಕೃತಿಕ ಕಾರ್ಯಗಳು, ಸಮುದಾಯ ಕಾರ್ಯಕ್ರಮಗಳಿಗೆ ಭವನದ ಅಗತ್ಯವಿದೆ. ಸಮುದಾಯ ಭವನಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದರು.
ಸಂಘದ ಅಧ್ಯಕ್ಷ ಶರಣಪ್ಪ ಕಾಶೆಂಪುರ್, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಸಂಘದ ಉಪಾಧ್ಯಕ್ಷ ಮಾರುತಿ ಮಾಸ್ಟರ್, ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸನ್ಮುಖಪ್ಪ ವಾಲಿಕರ್, ಮುಖಂಡ ಅಂಬ್ರೇಶ ಭಾಲ್ಕೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.