
ಭಾಲ್ಕಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡು ದೇಶದ ಸತ್ಪ್ರಜೆಗಳಾಗಿ ಬಾಳಬೇಕು ಎಂದು ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಗುರುವಾರ ಆಯೋಜಿಸಿದ್ದ 319ನೇ ಮಾಸಿಕ ಶರಣ ಸಂಗಮ ಮತ್ತು ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ 90ನೇ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಚನ್ನಬಸವ ಪಟ್ಟದ್ದೇವರು 1936ರಲ್ಲಿ ತೆಲಂಗಾಣದ ಮೋರ್ಗಿಯಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಾಂತಿವರ್ಧಕ ಕನ್ನಡ ಪಾಠಶಾಲೆ ಜೊತೆಗೆ ಶ್ರೀ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯ ಆರಂಭಿಸಿದರು. ಮುಷ್ಠಿಫಂಡದ ಮೂಲಕ ಧಾನ್ಯ ಸಂಗ್ರಹಿಸಿ ಪ್ರಸಾದ ನಿಲಯದಲ್ಲಿ ಮಕ್ಕಳಿಗೆ ಪ್ರಸಾದ ವ್ಯವಸ್ಥೆ ಮಾಡಿದರು’ ಎಂದರು.
‘ಈ ಪ್ರಸಾದ ನಿಲಯದಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಶಿಕ್ಷಣ ಜೊತೆಗೆ ಸಂಸ್ಕಾರ ಕಲಿತು ದೊಡ್ಡ ದೊಡ್ಡ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಪೀಠಾಧಿಪತಿ ಗುರುಬಸವ ಪಟ್ಟದೇವರು, ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಜಯಶ್ರೀ ಜಗನ್ನಾಥ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಬಂಡೆಪ್ಪ ಶರಣರು ಬಸವ ಗುರುವಿನ ಪೂಜೆ ನೆರವೇರಿಸಿದರು. ಬಸವರಾಜ ಮಾಳಗೆ, ವೈಜಿನಾಥ ಹಣಮಂತ ಜೀರ್ಗೆ ಸೇರಿದಂತೆ ಇತರರು ಇದ್ದರು.
ಭಾಲ್ಕಿ ಹಿರೇಮಠದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗಯ್ಯ ಸ್ವಾಮಿ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಬಾಬು ಬೆಲ್ದಾಳ ಪ್ರಸಾದ ನಿಲಯದ ವರದಿ ವಾಚನ ಮಾಡಿದರು. ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ರಂಜಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.