ಬೀದರ್: ವಾಯಾ ಕಲಬುರಗಿ ಮೂಲಕ ಬೀದರ್–ಬೆಂಗಳೂರು ನಡುವೆ ‘ವಂದೇ ಭಾರತ್’ ರೈಲು ಓಡಿಸಬೇಕೆನ್ನುವುದು ಈ ಭಾಗದ ಜನರ ಬೇಡಿಕೆಯಾಗಿದೆ. ಆದರೆ, ತಾಂತ್ರಿಕವಾಗಿ ಈ ಮಾರ್ಗ ಮೇಲ್ದರ್ಜೆಗೇರಬೇಕಿರುವ ಕಾರಣ ರೈಲು ಓಡಾಟದ ದಿನಗಳು ಇನ್ನೂ ದೂರ ಇವೆ.
ಬೀದರ್–ಕಲಬುರಗಿ ರೈಲು ಮಾರ್ಗವು ಸದ್ಯ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ರೈಲುಗಳ ಸಂಚಾರ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ವೇಗದಲ್ಲಿ ರೈಲುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಮಾರ್ಗವನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಇನ್ನಷ್ಟೇ ಕೆಲಸಗಳು ಆಗಬೇಕಿದೆ. ಈ ವಿಷಯವನ್ನು ಸ್ವತಃ ದಕ್ಷಿಣ ಮಧ್ಯ ರೈಲ್ವೆಯ ಅಧಿಕಾರಿಗಳೇ ತಿಳಿಸಿದ್ದಾರೆ.
ವಂದೇ ಭಾರತ್ ರೈಲು ಪ್ರತಿ ಗಂಟೆಗೆ 150ರಿಂದ 160 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ರಾಜಧಾನಿಯಿಂದ 700 ಕಿ.ಮೀ ದೂರದಲ್ಲಿರುವ ಬೀದರ್‌ನಿಂದ ಬೆಂಗಳೂರಿಗೆ ‘ವಂದೇ ಭಾರತ್’ ರೈಲು ಓಡಿಸಿದರೆ ಈ ಭಾಗದ ಜನರು ಹಾಗೂ ಉದ್ಯಮಿಗಳಿಗೆ ಬಹಳ ಅನುಕೂಲವಾಗುತ್ತದೆ. ಆದರೆ, ದೇಶದ ಅತಿ ವೇಗದ ರೈಲು ಸಂಚರಿಸುವ ಸಾಮರ್ಥ್ಯಕ್ಕೆ ತಕ್ಕಂತೆ ಬೀದರ್–ಕಲಬುರಗಿ ಮಾರ್ಗ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ತುರ್ತಾಗಿ ಕೆಲಸಗಳು ಆಗಬೇಕಿದೆ. ಇದು ಆದರೆ, ‘ವಂದೇ ಭಾರತ್’ ರೈಲು ಸಂಚಾರದ ಬೇಡಿಕೆ ಈಡೇರಬಹುದು.
ಸದ್ಯ ಬೀದರ್–ಕಲಬುರಗಿ ಮಾರ್ಗದಲ್ಲಿ ಡೆಮು ರೈಲು, ಬೀದರ್–ಬೆಂಗಳೂರು ವಿಶೇಷ ರೈಲುಗಳಷ್ಟೇ ಸಂಚರಿಸುತ್ತಿವೆ. ಈ ಮಾರ್ಗವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಿ ವಾಯಾ ಕಲಬುರಗಿ ಮೂಲಕ ಬೆಂಗಳೂರಿಗೆ ನೇರ ರೈಲಿನ ಸಂಪರ್ಕ ಕಲ್ಪಿಸಿದರೆ ಈ ಭಾಗದ ಜನರು ಕಡಿಮೆ ಅವಧಿಯಲ್ಲಿ ರಾಜಧಾನಿ ತಲುಪಲು ಸಾಧ್ಯವಾಗಲಿದೆ.
ಜನದಟ್ಟಣೆಗೆ ಬೇಸತ್ತ ಜನ: ಸದ್ಯ ಬೀದರ್ ಮೂಲಕ ಎರಡು ರೈಲುಗಳು ಬೆಂಗಳೂರಿಗೆ ನಿತ್ಯ ಸಂಚರಿಸುತ್ತವೆ. ನಿತ್ಯ ಮಧ್ಯಾಹ್ನ 12ಕ್ಕೆ ನಾಂದೇಡ್–ಬೆಂಗಳೂರು, ಸಂಜೆ 6.10ಕ್ಕೆ ಬೀದರ್–ಯಶವಂತಪುರ ರೈಲು ಸೇರಿದೆ. ನಾಂದೇಡ್–ಬೆಂಗಳೂರು ರೈಲು ಕ್ರಮಿಸಲು ಹೆಚ್ಚಿನ ಸಮಯ ಬೇಕಾಗುವುದರಿಂದ ಹೆಚ್ಚಿನವರು ಅದರಲ್ಲಿ ಸಂಚರಿಸಲು ಇಷ್ಟಪಡುವುದಿಲ್ಲ. ಬಹುತೇಕರಿಗೆ ಬೀದರ್–ಯಶವಂತಪುರ ಅಚ್ಚುಮೆಚ್ಚು.
ಈ ರೈಲು ನಿತ್ಯ ಸಂಜೆ 6.10ಕ್ಕೆ ಹೊರಟು ಬೆಳಿಗ್ಗೆ 8ರೊಳಗೆ ಬೆಂಗಳೂರು ತಲುಪುತ್ತದೆ. ಕಚೇರಿ ಕೆಲಸಗಳೆಲ್ಲ ಆಗುವುದರಿಂದ ಹೆಚ್ಚಿನವರು ಇದರಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಆದರೆ, ಈ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವುದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಜನ ಎದುರಿಸುತ್ತಿದ್ದಾರೆ.
ಸಾಮಾನ್ಯ ದರ್ಜೆಯ ಬೋಗಿಗಳಲ್ಲಿ ಜನ ಕಾಲಿಡಲು ಜಾಗ ಇರುವುದಿಲ್ಲ. ಅಷ್ಟರಮಟ್ಟಿಗೆ ಸದಾ ಪ್ರಯಾಣಿಕರು ತುಂಬಿರುತ್ತಾರೆ. ಇನ್ನು, ನಾನ್ ಎಸಿ ಸ್ಲೀಪರ್ ಕೂಡ ಸಾಮಾನ್ಯ ದರ್ಜೆಯ ಬೋಗಿಯಂತೆ ಬದಲಾಗಿದೆ. ಜನ ಬೇಕಾಬಿಟ್ಟಿ ನುಗ್ಗುತ್ತಾರೆ. ಅವರನ್ನು ಯಾರೂ ಕೂಡ ತಡೆಯುವವರು ಇಲ್ಲದಂತಾಗಿದೆ. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿಕೊಂಡು ಸೀಟು ಗಿಟ್ಟಿಸಿದರೂ ಸಮಸ್ಯೆ ತಪ್ಪಿದ್ದಲ್ಲ. ಈ ಸಂಬಂಧ ಅನೇಕರು ನೇರವಾಗಿ ರೈಲ್ವೆಗೆ ಪತ್ರ ಬರೆದಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಆದರೆ, ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಇತ್ತೀಚೆಗೆ ಈ ವಿಷಯವಾಗಿ ಸಂಸದ ಸಾಗರ್ ಖಂಡ್ರೆ ಕೂಡ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಆದರೆ, ಸಮರ್ಪಕವಾದ ಉತ್ತರ ಅವರಿಂದ ಬಂದಿರಲಿಲ್ಲ.
‘ಜನದಟ್ಟಣೆಗೆ ಕಾರಣಗಳೇನು? ಅದನ್ನು ಪತ್ತೆ ಹಚ್ಚಿ ತಿಳಿಸಬೇಕು. ರೈಲ್ವೆಗೆ ಸಂಬಂಧಿಸಿದ ಕಾಮಗಾರಿಗಳು ವಿಳಂಬವಾದರೆ ನನ್ನನ್ನು ಭೇಟಿಯಾಗಿ ತಿಳಿಸಿದರೆ, ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಮಾತನಾಡಿ ಬಗೆಹರಿಸಲು ಶ್ರಮಿಸುತ್ತೇನೆ’ ಎಂದು ಸಾಗರ್ ಖಂಡ್ರೆ ಅವರು ಅಧಿಕಾರಿಗಳಿಗೆ ಹೇಳಿದ್ದಾರೆ.
ರೈಲು ವಿಳಂಬಕ್ಕೇನು ಕಾರಣ?
ಬೀದರ್–ಬೆಂಗಳೂರು ಬೀದರ್–ಹೈದರಾಬಾದ್ ಸೇರಿದಂತೆ ಇತರೆ ರೈಲುಗಳು ಬೀದರ್–ವಿಕಾರಾಬಾದ್ ಮಾರ್ಗದ ಮೂಲಕ ಸಂಚಾರ ಬೆಳೆಸುತ್ತವೆ. ಈ ಮಾರ್ಗದಲ್ಲಿ ರೈಲುಗಳು ಪದೇ ಪದೇ ವಿಳಂಬವಾಗಿ ಸಂಚರಿಸುತ್ತವೆ. ಇದಕ್ಕೆ ಕಾರಣ ಈ ಮಾರ್ಗದಲ್ಲಿ ನಡೆಯುತ್ತಿರುವ ಅಕ್ರಮಗಳು ಎಂದು ಗೊತ್ತಾಗಿದೆ. ‘ಈ ಮಾರ್ಗದಲ್ಲಿ ‘ನಟೋರಿಯಸ್’ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಆಗಾಗ ರೈಲುಗಳ ಹಳಿಯಲ್ಲಿ ವಿವಿಧ ಪ್ರಕಾರದ ವಸ್ತುಗಳನ್ನು ಇಡುತ್ತಿದ್ದಾರೆ. ಇದರಿಂದ ಅನಾನುಕೂಲವಾಗುತ್ತಿದೆ. ಅನಿವಾರ್ಯವಾಗಿ ರೈಲುಗಳನ್ನು ನಿಲ್ಲಿಸಬೇಕಾಗುತ್ತಿದೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತರಲಾಗಿದೆ’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಂದೇ ಭಾರತ್ ಸುತ್ತ...
‘ವಂದೇ ಭಾರತ್’ ರೈಲು ಪ್ರತಿ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ದೇಶದಲ್ಲಿ ಸದ್ಯ 150ರಿಂದ 160 ಕಿ.ಮೀ ವೇಗದಲ್ಲಿ ಈ ರೈಲು ಸಂಚರಿಸುತ್ತಿದೆ. ದೇಶದ ಅತಿ ವೇಗದ ರೈಲು ಎಂಬ ಖ್ಯಾತಿ ಗಳಿಸಿದೆ. ಸಹಜವಾಗಿಯೇ ಇದಕ್ಕೆ ಬೇಡಿಕೆ ಹೆಚ್ಚಾಗಿದೆ.
ರೈಲುಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಬೀದರ್–ಕಲಬುರಗಿ ಮಾರ್ಗವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಬೇಕು. ಈ ಸಂಬಂಧ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗುವುದು-ಬಿ.ಜಿ. ಶೆಟಕಾರ ಜಿಲ್ಲಾಧ್ಯಕ್ಷ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.