ADVERTISEMENT

ಚಿಟಗುಪ್ಪ: ಅಗ್ನಿ ತುಳಿದ ಸಹಸ್ರಾರು ಭಕ್ತರು

ಚಾಂಗಲೇರಾ ಗ್ರಾಮದ ಐತಿಹಾಸಿಕ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:40 IST
Last Updated 6 ನವೆಂಬರ್ 2025, 5:40 IST
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗ್ರಾಮದ ವೀರಭದ್ರೇಶ್ವರ ಜಾತ್ರೆಯಲ್ಲಿ ಅಗ್ನಿ ತುಳಿದ ಭಕ್ತರು
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗ್ರಾಮದ ವೀರಭದ್ರೇಶ್ವರ ಜಾತ್ರೆಯಲ್ಲಿ ಅಗ್ನಿ ತುಳಿದ ಭಕ್ತರು   

ಚಿಟಗುಪ್ಪ (ಹುಮನಾಬಾದ್): ತಾಲ್ಲೂಕಿನ ಚಾಂಗಲೇರಾ ಗ್ರಾಮದ ಐತಿಹಾಸಿಕ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಅಗ್ನಿ ತುಳಿಯುವ ಕಾರ್ಯಕ್ರಮ ಜರುಗಿತು.

ಇಲ್ಲಿಯ ಥೇರು ಮೈದಾನದಿಂದ ವೀರಭದ್ರೇಶ್ವರ ದೇವಸ್ಥಾನದವರೆಗಿನ ರಸ್ತೆಯುದ್ದಕ್ಕೂ ಜನಸಾಗರವೇ ನೆರೆದಿತ್ತು. ಬುಧವಾರ ಬೆಳಿಗ್ಗೆ ನಡೆದ ಅಗ್ನಿ ತುಳಿಯುವ ಕಾರ್ಯಕ್ರಮದಲ್ಲಿ ಜನರ ನೂಕುನುಗ್ಗಲು ಉಂಟಾಯಿತು.

ಒಂದು ಬಾರಿ ಜಾತ್ರೆಯಲ್ಲಿ ಅಗ್ನಿ ತುಳಿದವರು ಮೂರು ವರ್ಷ ಮುಂದುವರಿಸುವ ವಾಡಿಕೆಯಿರುವುದರಿಂದ ಸಾವಿರಾರು ಜನರು ಅಗ್ನಿಕುಂಡದ ಸುತ್ತ ನೆರೆದಿದ್ದರು. ಕುಂಡದಲ್ಲಿ ‌ಕಾಯಿ ಕರ್ಪೂರ ಎಸೆದು ಐದು ಸುತ್ತು ಹಾಕಿ ಹರಕೆ ಪೂರೈಸಿದರು.

ADVERTISEMENT

ಈ ಅಗ್ನಿ ತುಳಿಯುವ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ತೆಲಂಗಾಣ, ಆಂಧ್ರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಯ ಭಕ್ತರು ಅಲ್ಲದೇ ಕಲಬುರಗಿ ಜಿಲ್ಲೆಯು ಚಿಂಚೋಳಿ , ಹುಮನಾಬಾದ್, ಚಿಟಗುಪ್ಪ ತಾಲ್ಲೂಕಿನ ಗ್ರಾಮೀಣ ಭಾಗದ ಬಹುತೇಕ ಹಳ್ಳಿಯ ಜನರು ಸರತಿ ಸಾಲಿನಲ್ಲಿ ನಿಂತು ಅಗ್ನಿ ತುಳಿದು ಹರಕೆ ತೀರಿಸಿದರು.

ಸಂಭ್ರಮದ ಪಲ್ಲಕಿ ಉತ್ಸವ: ಚಾಂಗಲೇರಾ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ರಾತ್ರಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.

ದೇವಸ್ಥಾನದಲ್ಲಿ ರುದ್ರಾಭಿಷೇಕ, ಬಿಲ್ವಪತ್ರೆ ಅರ್ಚನೆ ನಂತರ ವೀರಭದ್ರೇಶ್ವರ ಬೆಳ್ಳಿ ಪೂಜೆ ಭಕ್ತರ ಗಮನ ಸೆಳೆಯಿತು. ನಂತರ ಅಗ್ನಿಕುಂಡ ಉತ್ಸವ ನಡೆಯಿತು. ವೀರಭದ್ರೇಶ್ವರರ ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ಅಗ್ನಿ ಕುಂಡದ ವರೆಗೆ ಸಕಲ ವಾದ್ಯ ಮೇಳದೊಂದಿಗೆ ನಡೆಯಿತು.

ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಪುರುವಂತರು ವೀರಗಾಸೆ ಪ್ರದರ್ಶನ ನೀಡಿದರು. ನಂದಿಕೋಲು ಹೊತ್ತವರು, ಪಲ್ಲಕ್ಕಿ ಹೊತ್ತುಕೊಂಡ ಬಂದ ಭಕ್ತರು, ಪುರುವಂತರು ಪಲ್ಲಕ್ಕಿ ಸಮೇತವಾಗಿ ಅಗ್ನಿಕುಂಡ ಪ್ರವೇಶದ ನಂತರ ನೂರಾರು ಜನ ಭಕ್ತರು ಅಗ್ನಿಕುಂಡ ಹಾಯ್ದು ಹರಕೆಯನ್ನು ಪೂರೈಸಿದರು.

ಅನ್ನದಾಸೋಹ: ಜಾತ್ರೆಗೆ ಆಗಮಿಸಿದ ರಾಜ್ಯ ಹಾಗೂ ಹೊರರಾಜ್ಯದ ಭಕ್ತರಿಗಾಗಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದ ಬಹುತೇಕ ಕಡೆಗಳಲ್ಲಿ ಅನ್ನದಾಸೋಹ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅನ್ನದಾಸೋಹದಲ್ಲಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಪೊಲೀಸ್ ಬಂದೋಬಸ್ತ್: ವೀರಭದ್ರೇಶ್ವರ ಜಾತ್ರೆಗೆ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಜನರು ಆಗಮಿಸುವ ಹಿನ್ನೆಲೆಯಲ್ಲಿ ಚಾಂಗಲೇರಾ ಗ್ರಾಮದ ವಿವಿಧೆಡೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಚಾಂಗಲೇರಾ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.