ADVERTISEMENT

ಪೊಲೀಸ್ ಬಂದೋಬಸ್ತ್‌ನಲ್ಲಿ ಸಭೆ ಸಂಪನ್ನ

ಹುಮನಾಬಾದ್‌: ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಭೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 5:45 IST
Last Updated 10 ಜನವರಿ 2026, 5:45 IST
ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಜನರು
ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಜನರು   

ಹುಮನಾಬಾದ್: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಭೆಯು ಸಂಪೂರ್ಣ ಪೊಲೀಸರ ಬಂದೋಬಸ್ತ್‌ನಲ್ಲಿ ಶುಕ್ರವಾರ ರಾತ್ರಿ ನಡೆಯಿತು.

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಅವರ ನಡುವೆ ಈಚೆಗೆ ಬೀದರ್ ಜಿಲ್ಲಾ ಕೆಡಿಪಿ ಸಭೆಯಲ್ಲಿ ನಡೆದಿದ್ದ ಜಗಳ ಮತ್ತೆ ಈ ಸಭೆಯಲ್ಲಿಯೂ ಇಬ್ಬರ ನಡುವೆ ವಾಗ್ವಾದ ಮುಂದುವರೆಯಬಾರದು ಎಂದು ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಮಡೋಳಪ್ಪ ಅವರ ನೇತೃತ್ವದಲ್ಲಿ 3 ಸಿಪಿಐ, 12 ಪಿಎಸ್ಐ, 18 ಎಎಸ್ಐ, 80 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿತ್ತು.

ADVERTISEMENT

ಸಂಜೆ ಆಗುತ್ತಿದ್ದಂತೆ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಜನರು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಆಗಮನಕ್ಕೆ ಕುತೂಹಲದಿಂದ ಕಾಯುತ್ತಾ ಪರಸ್ಪರ ಎರಡೂ ಕುಟುಂಬಗಳ ಬಗ್ಗೆ ಮಾತನಾಡಿಕೊಳ್ಳುತ್ತಿರುವುದು ದೃಶ್ಯಗಳು ಕಂಡುಬಂತು.

ಸಭೆಯಲ್ಲಿ ಹಿರೇಮಠ ಸಂಸ್ಥಾನದ ರೇಣುಕಾ ವೀರಗಂಗಾಧರ್ ಶಿವಾಚಾರ್ಯ, ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ವೀರಣ್ಣ ಪಾಟೀಲ, ಬಸವರಾಜ್ ಆರ್ಯ, ಸುನೀಲ ಪಾಟೀಲ, ಬಸವಕಲ್ಯಾಣ ಸಹಾಯಕ ನಿರ್ದೇಶಕ ಪ್ರಕಾಶ್ ಕುದ್ರೆ, ತಹಶೀಲ್ದಾರ್ ಅಂಜುಂ ತಬಸುಮ್, ಚಿಟಗುಪ್ಪ ತಹಶೀಲ್ದಾರ್ ಮಂಜುನಾಥ್ ಪಂಚಾಳ್, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಪುರಸಭೆ ಮುಖ್ಯಾಧಿಕಾರಿ ವನೀತಾಬಾಯಿ, ಡಾ. ಶಿವಕುಮಾರ್ ಸಿದ್ದೇಶ್ವರ, ಲಿಂಗರಾಜ್ ಅರಸ್, ಡಾ. ಗೋವಿಂದ್, ವೆಂಕಟೇಶ್ ಗೂಡಾಳ್, ಶಿವಪ್ರಕಾಶ್ ಹಿರೇಮಠ, ಬಸವರಾಜ ಆರ್ಯ, ಮಲ್ಲಿಕಾರ್ಜುನ ಮಾಶಟ್ಟಿ, ದತ್ತ ಕುಮಾರ್ ಚಿದ್ರಿ, ಮಹೇಶ್ ಅಗಡಿ, ಬಾಬುರಾವ್ ಪೋಂಚಪಂಳ್ಳಿ, ಗಿರೀಶ್ ತುಂಬಾ, ಶ್ರೀನಾಥ್ ದೇವಣಿ ಸೇರಿದಂತೆ ಇತರರು ಇದ್ದರು.‌

ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿದರು

‘ಜಾತ್ರೆ ವಿಜೃಂಭಣೆಯಿಂದ ಜರುಗಲಿ’

ಜಾತ್ರಾ ಮಹೋತ್ಸವವು ಕಳೆದ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರಾ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಜೆಸ್ಕಾಂ ಇಲಾಖೆ ಎಚ್ಚರ ವಹಿಸಬೇಕು. ಪುರಸಭೆ ಅವರು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆ ಅಂಬುಲೆನ್ಸ್ ವ್ಯವಸ್ಥೆ ತುರ್ತು ಚಿಕಿತ್ಸೆಗೆ ಮುನ್ನೆಚ್ಚರ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚಿಸಿದರು. ಮಾಜಿ ಸಚಿವ ರಾಜಶೇಖರ ಪಾಟೀಲ ಮಾತನಾಡಿ ‘ಜಾತ್ರೆಯು 10 ರಿಂದ 27 ವರೆಗೆ ಸಡಗರದಿಂದ ನಡೆಯಲಿದೆ. ಈ ಜಾತ್ರೆಗೆ ರಾಜ್ಯ ಸೇರಿದಂತೆ ತೆಲಂಗಾಣ ಮಹಾರಾಷ್ಟ್ರದ ಭಕ್ತರು ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಭಕ್ತರಿಗೆ ಮೂಲ ಸೌಕರ್ಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಮಾತನಾಡಿ ಜಾತ್ರೆಯ ಸಂದರ್ಭದಲ್ಲಿ ಪಟ್ಟಣದಲ್ಲಿ ಪುರಸಭೆ ಅವರು ಸಹ ಪಟ್ಟಣದಲ್ಲಿ ವಿದ್ಯುತ್ ದೀಪ ಸ್ವಚ್ಚತೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಬಿಜೆಪಿ ಮುಖಂಡ ಬಸವರಾಜ ಆರ್ಯ ಮಾತನಾಡಿ ‘ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅವರು ವಿಷೇಶ ನಿಗಾ ವಹಿಸಬೇಕು’ ಎಂದರು.

ಸಭೆಗೆ ಶಾಸಕ ಗೈರು

ಪಟ್ಟಣದ ಬಸವರಾಜ ಪಾಟೀಲ ಕಲ್ಯಾಣ ಮಂಟಪದಲ್ಲಿ ಜಾತ್ರೆ ನಿಮಿತ್ತ ಆಯೋಜಿಸಿದ್ದ ಸಭೆಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಗೈರಾದರು. ಪಕ್ಷದ ಸಭೆ ಇರುವ ಕಾರಣ ಬೆಂಗಳೂರಿಗೆ ತೆರಳಿದ್ದರು. ಹೀಗಾಗಿ ಸಭೆಯಲ್ಲಿ ಭಾಗವಹಿಸಿಲ್ಲ. ಜ.7ರಂದು ಜಾತ್ರಾ ಪೂರ್ವಭಾವಿ ನಡೆಯಬೇಕಿತ್ತು ಆದರೆ ಜ.6ರಂದು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನಡುವೆ ನಡೆದ ಗಲಾಟೆ ಸಂಬಂಧ ಸಭೆ ಮುಂದೂಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.