
ಬೀದರ್: ಗಡಿನಾಡು ಬೀದರ್ ಜಿಲ್ಲೆಯಲ್ಲಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ಜ. 24ರಿಂದ 26ರ ವರೆಗೆ ಹಮ್ಮಿಕೊಂಡಿರುವ ಕನ್ನಡ ಪುಸ್ತಕಲೋಕದ ಅತಿದೊಡ್ಡ ವೀರಲೋಕ ಪುಸ್ತಕ ಸಂತೆಗೆ ನಗರದ ಸಾಯಿ ಶಾಲೆ ಆವರಣದಲ್ಲಿ ಭರದ ಸಿದ್ಧತೆಗಳು ನಡೆದಿವೆ.
ಉದ್ಘಾಟನಾ ಸಮಾರಂಭ, ಗೋಷ್ಠಿಗಳು ನಡೆಯಲಿರುವ ಸ್ಥಳ ಹಾಗೂ ಮಳಿಗೆಗಳ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಶುಕ್ರವಾರ (ಜ.23) ಸಂಜೆವರೆಗೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಳ್ಳಲಿವೆ.
ಬೆಂಗಳೂರಿನ ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪುಸ್ತಕ ಸಂತೆಗೆ ಜ.24ರ ಬೆಳಿಗ್ಗೆ 10.30ಕ್ಕೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಚಾಲನೆ ನೀಡುವರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಚಲನಚಿತ್ರ ನಟ ಪ್ರೇಮ್, ವೀರಲೋಕದ ವೀರಕಪುತ್ರ ಶ್ರೀನಿವಾಸ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಜ.25 ರಂದು ಜಿಲ್ಲೆಯ ಸಾಹಿತಿಗಳ ಪುಸ್ತಕ ಬಿಡುಗಡೆ ಬೆಳಿಗ್ಗೆ 10.30ಕ್ಕೆ ಶಾಸಕ ಪ್ರಭು ಚವಾಣ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಇತರರು ಭಾಗವಹಿಸಲಿದ್ದಾರೆ.
ಜ.26ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಭಾಲ್ಕಿ ಹಿರೇಮಠ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯ ಇರಲಿದೆ. ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಸಮಾರೋಪ ನುಡಿಗಳಾಡುವರು. ಸಂಸದ ಸಾಗರ ಖಂಡ್ರೆ, ಶಾಸಕರಾದ ಶರಣು ಸಲಗರ, ಡಾ. ಸಿದ್ಧಲಿಂಗಪ್ಪ ಪಾಟೀಲ, ಮಾಜಿ ಶಾಸಕ ಅಶೋಕ್ ಖೇಣಿ, ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಮಾಜಿ ಸಭಾಪತಿ ವಿ.ಆರ್. ಸುದರ್ಶನ ಸೇರಿದಂತೆ ಜಿಲ್ಲೆಯ ಹಲವು ಶಿಕ್ಷಣ ತಜ್ಞರು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.