ADVERTISEMENT

ಈರುಳ್ಳಿ, ಬೆಳ್ಳುಳ್ಳಿ ಬೆಲೆ ಸ್ಥಿರ

ಚಂದ್ರಕಾಂತ ಮಸಾನಿ
Published 10 ಜನವರಿ 2020, 19:45 IST
Last Updated 10 ಜನವರಿ 2020, 19:45 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್‌: ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಣಿತ ಕಡಿಮೆಯಾಗಿದೆ. ಹಾಗಂತ ಅದರ ಬೆಲೆ ಹೇಳಿಕೊಳ್ಳುವಷ್ಟು ಕಡಿಮೆಯಾಗಿಲ್ಲ. ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಲೆ ಒಂದು ವಾರದಿಂದ ಸ್ಥಿರವಾಗಿಯೇ ಇದೆ.

ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿಗೆ 60 ರೂಪಾಯಿಗೆ ಮಾರಾಟವಾಗುತ್ತಿದೆ. ದೀರ್ಘಕಾಲದ ವರೆಗೆ ಸಂಗ್ರಹಿಸಿ ಇಟ್ಟರೆ ಹಾಳಾಗಬಹುದು ಎನ್ನುವ ಆತಂಕದಿಂದ ಕೆಲ ವ್ಯಾಪಾರಿಗಳು ಗೂಡ್ಸ್‌ ಆಟೊದಲ್ಲಿ ಈರುಳ್ಳಿ ತುಂಬಿಕೊಂಡು ಓಣಿ ಓಣಿಗಳಿಗೆ ತೆರಳಿ ₹ 100ಗೆ ಎರಡು ಕೆ.ಜಿ ಮಾರಾಟ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.

ಬೆಳ್ಳುಳ್ಳಿ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದೆ. ಹೊಸ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಇದೇ ಕಾರಣಕ್ಕೆ ಅದರ ಬೆಲೆ ಕಡಿಮೆಯಾಗುತ್ತಿಲ್ಲ. ಬೆಳ್ಳುಳ್ಳಿ ಬೆಲೆ ಪ್ರತಿ ಕೆ.ಜಿಗೆ ₹ 200 ಇರುವ ಕಾರಣ ಗ್ರಾಹಕರು ಬೆಲೆ ಕೇಳಿಯೇ ಖರೀದಿಸಲು ಹಿಂಜರಿಯುತ್ತಿದ್ದಾರೆ.

ADVERTISEMENT

ಮಾರುಕಟ್ಟೆಯಲ್ಲಿ ಈ ವಾರ ಕೆಲ ಸೊಪ್ಪಿನ ಬೆಲೆಯಲ್ಲಿ ಏರಿಕೆಯಾಗಿದೆ. ಮೆಂತೆ, ಕೊತಂಬರಿ ಹಾಗೂ ಕರಿಬೇವಿನ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಒಂದು ಸಾವಿರ ರೂಪಾಯಿ ಹೆಚ್ಚಳವಾಗಿದೆ. ಜಿಲ್ಲೆಯ ಜನ ಹೆಚ್ಚು ಇಷ್ಟಪಡುವ ಬದನೆಕಾಯಿ, ಆಲೂಗಡ್ಡೆ, ಹೂಕೋಸು, ಪಾಲಕ್‌ ಹಾಗೂ ಹಸಿ ಮೆಣಸಿನಕಾಯಿ ಬೆಲೆ ಕ್ವಿಂಟಲ್‌ಗೆ ₹ 500 ಹೆಚ್ಚಾಗಿದೆ.

ಸಬ್ಬಸಗಿ, ಬೀಟರೂಟ್, ತೊಂಡೆಕಾಯಿ, ಬೆಂಡೆಕಾಯಿ, ಹಿರೇಕಾಯಿ ಹಾಗೂ ನುಗ್ಗೆಕಾಯಿ ಬೆಲೆ ಸ್ಥಿರವಾಗಿದೆ. ಎಲೆಕೋಸು ಬೆಲೆ ಕ್ವಿಂಟಲ್‌ಗೆ ₹ 500, ಗಜ್ಜರಿ ಹಾಗೂ ಬೀನ್ಸ್‌ ಬೆಲೆ 1 ಸಾವಿರ ರೂಪಾಯಿ ಕಡಿಮೆಯಾಗಿದೆ.

ಬೀದರ್‌ ಮಾರುಕಟ್ಟೆಗೆ ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬರುತ್ತಿದೆ. ಆಗ್ರಾದ ಆಲೂಗಡ್ಡೆ ಆವಕ ಮುಂದುವರಿದಿದೆ. ನೆರೆಯ ತೆಲಂಗಾಣದ ಜಿಲ್ಲೆಗಳಿಂದ ಮೆಣಸಿನಕಾಯಿ, ಬೀನ್ಸ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ ಬಂದಿದೆ.

‘ಬೀದರ್‌ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಬದನೆಕಾಯಿ, ಹಿರೇಕಾಯಿ, ಕೊತಂಬರಿ ಹಾಗೂ ಕರಿಬೇವು ಬಂದಿದೆ.

ಸೊಪ್ಪಿಗೆ ಬೇಡಿಕೆ ಇದೆ. ಆದರೆ ಹೊರ ಜಿಲ್ಲೆಗಳಿಂದಲೂ ಮಾರುಕಟ್ಟೆಗೆ ಸೊಪ್ಪು ಬರುತ್ತಿಲ್ಲ. ಮಕರ ಸಂಕ್ರಮಣದ ವೇಳೆ ಕೆಲ ತರಕಾರಿ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದು ಗಾಂಧಿಗಂಜ್ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.

***
ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ

ಈರುಳ್ಳಿ 50-60, 50-60
ಮೆಣಸಿನಕಾಯಿ 20-25, 20-30
ಆಲೂಗಡ್ಡೆ 25-30, 25-30
ಎಲೆಕೋಸು 20-25, 15-20
ಹೂಕೋಸು 30-40, 40-50
ಬೆಳ್ಳುಳ್ಳಿ 180-200, 180-200
ಗಜ್ಜರಿ 30-40, 25-30
ಬೀನ್ಸ್‌ 30-40, 40-50
ಬದನೆಕಾಯಿ 20-25, 20-30
ಮೆಂತೆ ಸೊಪ್ಪು 15-20, 20-30
ಸಬ್ಬಸಗಿ 20-30, 20-30
ಬೀಟ್‌ರೂಟ್‌ 50-60, 50-60
ತೊಂಡೆಕಾಯಿ 30-40, 30-40
ಕರಿಬೇವು 40-50, 50-60
ಕೊತಂಬರಿ 15-20, 20-30
ಟೊಮೆಟೊ 10-15, 10-15
ಪಾಲಕ್‌ 15-20, 20-25
ಬೆಂಡೆಕಾಯಿ 30-40, 35-40
ಹಿರೇಕಾಯಿ 30-40, 30-40
ನುಗ್ಗೆಕಾಯಿ 120-150, 120-150

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.