ADVERTISEMENT

ತರಕಾರಿ ಬೆಲೆಯಲ್ಲಿ ಏರಿಳಿತ: ಶತಕ ಬಾರಿಸಿದ ಟೊಮೆಟೊ, ಮೆಂತೆ, ಬೀನ್ಸ್‌

ಶತಕ ಬಾರಿಸಿದ ಟೊಮೆಟೊ, ಮೆಂತೆ, ಬೀನ್ಸ್‌

ಚಂದ್ರಕಾಂತ ಮಸಾನಿ
Published 4 ಜೂನ್ 2022, 19:30 IST
Last Updated 4 ಜೂನ್ 2022, 19:30 IST
ಬೀದರ್‌ನ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಗ್ರಾಹಕರು
ಬೀದರ್‌ನ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಗ್ರಾಹಕರು   

ಬೀದರ್: ಈ ವಾರ ತರಕಾರಿ ಬೆಲೆಯಲ್ಲಿ ಭಾರಿ ಏರಿಳಿತವಾಗಿದೆ. ಪ್ರಮುಖ ತರಕಾರಿ ಬೆಲೆ ಕಡಿಮೆಯಾದರೂ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯವಿಲ್ಲ. ಈರುಳ್ಳಿ ಮಾತ್ರ ಮಾರುಕಟ್ಟೆಯಲ್ಲಿ ಗ್ರಾಹಕರ ಹಿತ ಕಾಯ್ದುಕೊಂಡು ಸಾಗಿದೆ. ಗ್ರಾಹಕರನ್ನು ಎದುರು ಹಾಕಿಕೊಂಡರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಭಾವಿಸಿ ನುಗ್ಗೆಕಾಯಿ ಕೊಂಚ ಮುದುಡಿಕೊಂಡಿದೆ.

ಎಲ್ಲರೂ ಇಷ್ಟಪಡುವ ಹಿರೇಕಾಯಿ ಮಾತ್ರ ಮಾರುಕಟ್ಟೆಯಲ್ಲಿ ಹಿರೇತನ ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಚಳಿಗಾಲದಲ್ಲಿ ತನ್ನ ಮಹಿಮೆ ತೋರಿಸಿದ ನುಗ್ಗೆಕಾಯಿ ಒಂದಿಷ್ಟು ಬೆಲೆ ಇಳಿಸಿಕೊಂಡರೂ ತನ್ನ ಘನತೆ ಕಡಿಮೆ ಮಾಡಿಕೊಂಡಿಲ್ಲ.

ಆಲೂಗಡ್ಡೆ, ಬೀಟ್‌ರೂಟ್‌, ಬೆಳ್ಳುಳ್ಳಿ, ಗಜ್ಜರಿ, ಬದನೆಕಾಯಿ, ಹಿರೇಕಾಯಿ, ಕರಿಬೇವು ಹಾಗೂ ಪಾಲಕ್‌

ADVERTISEMENT

ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಾಗಿದೆ.

ಎಲೆಕೋಸು, ತೊಂಡೆಕಾಯಿ, ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಇಳಿದಿದೆ. ಬೀನ್ಸ್‌, ಹೂಕೋಸು, ಟೊಮೆಟೊ, ಡೊಣ ಮೆಣಸಿನಕಾಯಿ ₹ 2 ಸಾವಿರ ಕಡಿಮೆಯಾಗಿದೆ. ಈರುಳ್ಳಿ, ಮೆಣಸಿನಕಾಯಿ, ಬೆಂಡೆಕಾಯಿ, ನುಗ್ಗೆಕಾಯಿ, ಚವಳೆಕಾಯಿ, ಮೆಂತೆ ಸೊಪ್ಪು, ಸಬ್ಬಸಗಿ ಬೆಲೆ ಸ್ಥಿರವಾಗಿದೆ.

ಕಳೆದ ವಾರ ₹ ಪ್ರತಿ ಕೆ.ಜಿಗೆ ₹ 120 ತಲುಪಿದ್ದ ಟೊಮೆಟೊ ಹಾಗೂ ಬೀನ್ಸ್‌ ₹ 100ಕ್ಕೆ ನಿಂತಿವೆ. ಆದರೂ ಗ್ರಾಹಕರು ಸುಲಭವಾಗಿ ಕೊಳ್ಳುವ ಬೆಲೆಯಲ್ಲಿ ಇಲ್ಲ. ನಾನಿಲ್ಲದೆ ಅಡುಗೆ ಸ್ವಾದ ಹೆಚ್ಚಿಸಲು ಸಾಧ್ಯವಿಲ್ಲ ಎನ್ನುವಂತೆ ಟೊಟೊಟೊ ಮಾರುಕಟ್ಟೆಯಲ್ಲಿ ಬೀಗಿಕೊಂಡು ನಿಂತಿದೆ. ಮೆಂತೆಸೊಪ್ಪು ಮಾತ್ರ ಸೊಪ್ಪು ಪ್ರಿಯರು ಹುಬ್ಬೇರಿಸುವಂತೆ ಬೆಲೆ ಏರಿಸಿಕೊಂಡಿದೆ.

ಈ ವಾರ ತೆಲಂಗಾಣದ ಜಿಲ್ಲೆಗಳಿಂದಲೇ ಅಧಿಕ ಪ್ರಮಾಣದಲ್ಲಿ ತರಕಾರಿ ಬಂದಿದೆ. ಸಾಮಾನ್ಯವಾಗಿ ನಿತ್ಯ ಬಳಸುವ ತರಕಾರಿ ಬೆಲೆಯಲ್ಲೇ ಹೆಚ್ಚಳವಾಗಿದೆ. ಮಳೆ ಶುರುವಾದರೆ ಒಂದಿಷ್ಟು ತರಕಾರಿ ಬೆಲೆ ಕಡಿಮೆಯಾಗಬಹುದು ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಬೆಳಗಾವಿಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಹೈದರಾಬಾದ್‌ನಿಂದ ಬೀಟ್‌ರೂಟ್‌, ನವಲಕೋಲ್, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ಗಜ್ಜರಿ, ತೊಂಡೆಕಾಯಿ, ಚವಳೆಕಾಯಿ, ಕುಂಬಳಕಾಯಿ, ಪಡವಲಕಾಯಿ, ಹಾಗಲಕಾಯಿ, ತುಪ್ಪದ ಹಿರೇಕಾಯಿ, ಬೀದರ್‌ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ. ಚಿಟಗುಪ್ಪ ತಾಲ್ಲೂಕಿನಿಂದ ಬದನೆಕಾಯಿ, ಎಲೆಕೋಸು, ಹಿರೇಕಾಯಿ, ಸಬ್ಬಸಗಿ, ಕೊತಂಬರಿ ಹಾಗೂ ಕರಿಬೇವು ನಗರದ ಮಾರುಕಟ್ಟೆಗೆ ಬಂದಿದೆ.

........................................................................

ತರಕಾರಿ ಮಾರುಕಟ್ಟೆ ಬೆಲೆ
......................................................................

ಈರುಳ್ಳಿ 5-10,5-10
ಮೆಣಸಿನಕಾಯಿ 50-60,50-60
ಆಲೂಗಡ್ಡೆ 20-30,30-40
ಎಲೆಕೋಸು 30-40,20-30
ಬೆಳ್ಳುಳ್ಳಿ 30-40,40-50
ಗಜ್ಜರಿ 60-80,50-60
ಬೀನ್ಸ್‌ 100-120,90-100
ಬದನೆಕಾಯಿ 20-30,30-40
ಮೆಂತೆ ಸೊಪ್ಪು 80-100,80-100
ಹೂಕೋಸು 60-80,50-60
ಸಬ್ಬಸಗಿ 50-60,50-60
ಬೀಟ್‌ರೂಟ್‌ 30-40,40-50
ತೊಂಡೆಕಾಯಿ 50-60,40-50
ಕರಿಬೇವು 20-30,30-40
ಕೊತಂಬರಿ 40-50,30-40
ಟೊಮೆಟೊ 100-120,80-100
ಪಾಲಕ್‌ 30-40,40-50
ಬೆಂಡೆಕಾಯಿ 30-40, 30-40
ಹಿರೇಕಾಯಿ 50-60,60-70
ನುಗ್ಗೆಕಾಯಿ 60-80,70-80
ಡೊಣ ಮೆಣಸಿನಕಾಯಿ 60-80,50-60
ಚವಳೆಕಾಯಿ 30-40,30-40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.