ADVERTISEMENT

ಬೀದರ್: ತಗ್ಗಿದ ಈರುಳ್ಳಿ ಬೆಲೆ, ಹಿಗ್ಗಿದ ಹಿರೇಕಾಯಿ

ಚಂದ್ರಕಾಂತ ಮಸಾನಿ
Published 11 ಅಕ್ಟೋಬರ್ 2019, 19:31 IST
Last Updated 11 ಅಕ್ಟೋಬರ್ 2019, 19:31 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್‌: ನಿತ್ಯ ಅಡುಗೆಗೆ ಬೇಕಾಗುವ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಲೆ ಸ್ವಲ್ಪ ಕಡಿಮೆಯಾಗಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ. ಇನ್ನೊಂದೆಡೆ ಬೀನ್ಸ್‌, ಹಿರೇಕಾಯಿ ಹಾಗೂ ಹೂಕೋಸು ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ.

ಈರುಳ್ಳಿ ಹಾಗೂ ಹಸಿ ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಕಡಿಮೆಯಾಗಿದೆ. ನಗರದ ಮಾರುಕಟ್ಟೆಗೆ ಈರುಳ್ಳಿ ಅಧಿಕ ಪ್ರಮಾಣದಲ್ಲಿ ಬಂದಿದೆ. ಆದರೆ, ಕಿರಾಣಿ ಅಂಗಡಿಗಳ ಮಾಲೀಕರು ಮಾತ್ರ ಈರುಳ್ಳಿಯನ್ನು ಹೆಚ್ಚಿನ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದಾರೆ. ಕೆಲವರು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಗ್ರಾಹಕರು ಈರುಳ್ಳಿಗೆ ಪರ್ಯಾಯವಾಗಿ ಬೆಳ್ಳುಳ್ಳಿ ಖರೀದಿಸುವುದನ್ನು ಕಡಿಮೆ ಮಾಡಿದ ಕಾರಣ ಬೆಳ್ಳುಳ್ಳಿ ಬೆಲೆಯೂ ದಿಢೀರ್‌ ಕ್ವಿಂಟಲ್‌ಗೆ ₹5,000 ಕುಸಿದಿದೆ.

ಆಲೂಗಡ್ಡೆ, ಬೀಟ್‌ರೂಟ್, ಬದನೆಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಎಲೆಕೋಸು, ಪಾಲಕ್‌ ಹಾಗೂ ಸಬ್ಬಸಗಿ ಸೊಪ್ಪಿನ ಬೆಲೆ ಸ್ಥಿರವಾಗಿದೆ. ಆಲೂಗಡ್ಡೆ ಬೆಲೆ ಪ್ರತಿ ಕೆಜಿಗೆ ₹20 ರೂಪಾಯಿ ಇದ್ದರೂ ಚಿಲ್ಲರೆ ಮಾರಾಟಗಾರರು ₹ 25 ರಂತೆ ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಮೆಂತೆ ಸೊಪ್ಪಿನ ಬೆಲೆ ದುಪ್ಪಟ್ಟಾಗಿದೆ. ಪ್ರತಿ ಕ್ವಿಂಟಲ್‌ಗೆ ₹ 5 ಸಾವಿರ ಇದ್ದ ಮೆಂತೆ ಇದೀಗ ₹ 10 ಸಾವಿರಕ್ಕೆ ಏರಿಕೆಯಾಗಿದೆ. ಬೀನ್ಸ್‌ ₹ 3 ಸಾವಿರ, ಬದನೆಕಾಯಿ, ಗಜ್ಜರಿ, ಹೂಕೋಸು ಹಾಗೂ ಕರಿಬೇವು ಬೆಲೆ ₹ 1 ಸಾವಿರ ಹೆಚ್ಚಳವಾಗಿದೆ. ಕೊತಂಬರಿ ₹ 250 ಹಾಗೂ ಟೊಮೆಟೊ ಬೆಲೆ ₹ 500 ಏರಿಕೆ ಕಂಡಿದೆ.

ಹೈದರಾಬಾದ್‌ನಿಂದ ಬೀನ್ಸ್, ತೊಂಡೆಕಾಯಿ, ಬೀಟ್‌ರೂಟ್‌, ಹೂಕೋಸು, ಎಲೆಕೋಸು, ಗಜ್ಜರಿ, ಟೊಮೆಟೊ, ಮೆಂತೆಸೊಪ್ಪು ಆವಕವಾಗಿದೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಆಗ್ರಾದಿಂದ ಆಲೂಗಡ್ಡೆ ಬಂದಿದೆ. ಬೀದರ್, ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನಿಂದ ಕರಿಬೇವು ಹಾಗೂ ಕೊತಂಬರಿ ಮಾರುಕಟ್ಟೆಗೆ ಆವಕವಾಗಿದೆ.

ಬೀದರ್‌ಗೆ ಬೆಳಗಾವಿ ಬಿಟ್ಟರೆ ರಾಜ್ಯದ ಯಾವ ಜಿಲ್ಲೆಗಳಿಂದಲೂ ತರಕಾರಿ ಬರುವುದಿಲ್ಲ. ದಕ್ಷಿಣ ಮಹಾರಾಷ್ಟ್ರ ಹಾಗೂ ಪಶ್ಚಿಮ ತೆಲಂಗಾಣದ ಜಿಲ್ಲೆಗಳಿಂದಲೇ ಬೀದರ್‌ಗೆ ಹೆಚ್ಚು ತರಕಾರಿ ಬರುತ್ತದೆ. ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ನಂತರ ಬೆಲೆ ಕುಸಿಯಲು ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಾಗಿ ಈರುಳ್ಳಿ ಕೊಳೆಯಲು ಶುರುವಾಗಿದೆ. ಈರುಳ್ಳಿ ಬೆಲೆ ಇನ್ನೂ ಕಡಿಮೆಯಾಗುವ ನಿರೀಕ್ಷೆ ಇದೆ.

‘ಈ ವಾರ ಪ್ರಮುಖ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಬೆಳ್ಳುಳಿ ದರ ಇಳಿಯಲು ಇನ್ನೂ ಒಂದು ತಿಂಗಳಾದರೂ ಬೇಕಾಗಲಿದೆ. ಕೊತಂಬರಿ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಸ್ಥಳೀಯ ರೈತರಿಗೆ ಅನುಕೂಲವಾಗಿದೆ’ ಎಂದು ಗಾಂಧಿ ಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.