ಔರಾದ್: ಪಟ್ಟಣದಲ್ಲಿ ಹಾದು ಹೋಗಿರುವ ಬೀದರ್–ಔರಾದ್ ರಾಷ್ಟ್ರೀಯ ಹೆದ್ದಾರಿ (161ಎ)ಯಲ್ಲಿ ಸರ್ವಿಸ್ ರಸ್ತೆಗಳು ಅತಿಕ್ರಮಣಗೊಂಡಿದ್ದು, ಜನರ ಸುಗಮ ಸಂಚಾರಕ್ಕೆ ನಿರ್ಮಿಸಲಾದ ಸರ್ವಿಸ್ ರಸ್ತೆಯ ಬಹುತೇಕ ಕಡೆಯಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇನ್ನು ಕೆಲವೆಡೆ ರಸ್ತೆಯ ಮೇಲೆ ವ್ಯಾಪಾರ–ವಹಿವಾಟು ನಡೆಸಲಾಗುತ್ತಿದೆ.
ಔರಾದ್ ಪಟ್ಟಣದ ಬಳಿ ಸರ್ವಿಸ್ ರಸ್ತೆಯಲ್ಲಿ ಜೀಪ್, ಟ್ರ್ಯಾಕ್ಟರ್ ಸೇರಿ ಇತರೆ ಖಾಸಗಿ ವಾಹನಗಳು ಜತೆಗೆ ಲಾರಿಗಳು ನಿಂತಿರುತ್ತವೆ. ಹೀಗಾಗಿ ಬೈಕ್ ಸವಾರರು, ಪಾದಚಾರಿಗಳು ಸರ್ವಿಸ್ ರಸ್ತೆ ಬಿಟ್ಟು ಮುಖ್ಯ ರಸ್ತೆ ಮೇಲೆ ಓಡಾಡಬೇಕಾಗಿದೆ. ಇದರಿಂದ ಆಗುವ ಅವಘಡಕ್ಕೆ ಯಾರು ಹೊಣೆ ಎಂದು ಪಟ್ಟಣದ ನಾಗರಿಕರು ಪ್ರಶ್ನಿಸಿದ್ದಾರೆ.
‘ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ನಿರ್ಮಾಣದ ಜತೆಗೆ ಜನರ ಸುರಕ್ಷತೆಗೂ ಗಮನ ಹರಿಸಬೇಕು. ಪಟ್ಟಣ ಪ್ರದೇಶದಿಂದ ಹಾದು ಹೋದ ಮುಖ್ಯ ರಸ್ತೆಯಲ್ಲಿ ಸೂಕ್ತ ಸೂಚನಾ ವ್ಯವಸ್ಥೆ ಮಾಡಬೇಕು. ಇಲ್ಲಿ ಸಾಕಷ್ಟು ಬಾರಿ ಅಪಘಾತ ಆಗುವುದು ತಪ್ಪಿರುವುದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಹೀಗಾಗಿ ಸರ್ವಿಸ್ ರಸ್ತೆ ಬಳಕೆ ಸೇರಿದಂತೆ ಪಾದಚಾರಿಗಳ, ಬೈಕ್ ಸವಾರರ ಹಿತ ಕಾಪಾಡಲು ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟಣದ ಮುಖಂಡ ಮಲ್ಲಿಕಾರ್ಜುನ ಶೆಟಕಾರ್ ಆಗ್ರಹಿಸಿದ್ದಾರೆ.
ಸರ್ವಿಸ್ ರಸ್ತೆ ಮೇಲೆ ದೊಡ್ಡ ದೊಡ್ಡ ಲಾರಿಗಳು ನಿಂತಿರುತ್ತವೆ. ಆದರೆ ಯಾರೂ ಕೇಳುತ್ತಿಲ್ಲ. ಈಗ ಶಾಲಾ–ಕಾಲೇಜು ಶುರುವಾಗಿವೆ. ಹೀಗಾಗಿ ಅವಘಡ ಸಂಭವಿಸುವ ಮುನ್ನ ಕ್ರಮ ಜರುಗಿಸಬೇಕು. ಈ ವಿಷಯದಲ್ಲಿ ಸಾರ್ವಜನಿಕರು ಸಂಚಾರ ನಿಯಮ ಪಾಲಿಸುವುದು ಅಷ್ಟೇ ಮುಖ್ಯ ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ಆಗ್ರಹಿಸಿದ್ದಾರೆ.
ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಈ ಕುರಿತು ಹೆದ್ದಾರಿ ಪೆಟ್ರೊಲಿಂಗ್‍ನವರಿಗೂ ಮಾಹಿತಿ ನೀಡುತ್ತೇವೆ.ಉಪೇಂದ್ರ ಪಿಎಸ್‍ಐ ಔರಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.