ADVERTISEMENT

ವಯಾ ಬೀದರ್-ಹುಮನಾಬಾದ್ ಮೂರು ಹೊಸ ರೈಲು

ಸೋಮವಾರ, ಮಂಗಳವಾರ ಸಂಚರಿಸಲಿರುವ ವಿಶೇಷ ರೈಲುಗಳು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 13:31 IST
Last Updated 3 ಡಿಸೆಂಬರ್ 2022, 13:31 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ಬೀದರ್-ಹುಮನಾಬಾದ್ ಮಾರ್ಗವಾಗಿ ಮೂರು ಹೊಸ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ನಾಂದೇಡ್-ಯಶವಂತಪುರ-ನಾಂದೇಡ್ (ಸಂಖ್ಯೆ 07093/07094), ಸೋಲಾಪುರ-ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲಾಪುರ (ಸಂಖ್ಯೆ 01435/01436) ಹಾಗೂ ಸೋಲಾಪುರ-ತಿರುಪತಿ-ಸೋಲಾಪುರ (ಸಂಖ್ಯೆ 01437/01438) ರೈಲುಗಳು ಬೀದರ್-ಹುಮನಾಬಾದ್ ಮಾರ್ಗವಾಗಿ ಓಡಲಿವೆ ಎಂದು ಹೇಳಿದ್ದಾರೆ.

ನಾಂದೇಡ್-ಯಶವಂತಪುರ-ನಾಂದೇಡ್ (ಸಂಖ್ಯೆ 07093) ರೈಲು ಡಿಸೆಂಬರ್ 5, 12, 19 ಮತ್ತು 26 ರ ನಾಲ್ಕು ಸೋಮವಾರಗಳಂದು ನಾಂದೇಡ್‍ನಿಂದ ಮಧ್ಯಾಹ್ನ 1.35ಕ್ಕೆ ಹೊರಟು ಪೂರ್ಣ, ಪರಭಣಿ, ಲಾತೂರ ರೋಡ್ ಮೂಲಕ ರಾತ್ರಿ 7.25ಕ್ಕೆ ಭಾಲ್ಕಿ, 7.50ಕ್ಕೆ ಬೀದರ್, 8.55ಕ್ಕೆ ಹುಮನಾಬಾದ್‍ಗೆ ತಲುಪಲಿದೆ. ಅಲ್ಲಿಂದ ಕಲಬುರಗಿ, ರಾಯಚೂರ, ಹಿಂದುಪುರ, ಯಲಹಂಕ ಮಾರ್ಗವಾಗಿ ಮಂಗಳವಾರ ಬೆಳಿಗ್ಗೆ 11ಕ್ಕೆ ಯಶವಂತಪುರಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಯಶವಂತಪುರ-ನಾಂದೇಡ್-ಯಶವಂತಪುರ (ಸಂಖ್ಯೆ 07094) ರೈಲು 6, 13, 20, 27ರ ನಾಲ್ಕು ಮಂಗಳವಾರಗಳಂದು ಸಂಜೆ 4.15ಕ್ಕೆ ಯಶವಂತಪುರದಿಂದ ಹೊರಟು ಬಂದ ಮಾರ್ಗವಾಗಿ ಬುಧವಾರ ನಸುಕಿನ ಜಾವ 3.25ಕ್ಕೆ ಹುಮನಾಬಾದ್, ಬೆಳಿಗ್ಗೆ 5ಕ್ಕೆ ಬೀದರ್ ಮತ್ತು ಬೆಳಿಗ್ಗೆ 5.45ಕ್ಕೆ ಭಾಲ್ಕಿ, ಮಧ್ಯಾಹ್ನ 1ಕ್ಕೆ ನಾಂದೇಡ್ ತಲುಪಲಿದೆ ಎಂದು ಹೇಳಿದ್ದಾರೆ.

ಸೋಲಾಪುರ-ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲಾಪುರ (ಸಂಖ್ಯೆ 01435/01436) ಮತ್ತು ಸೋಲಾಪುರ-ತಿರುಪತಿ-ಸೋಲಾಪುರ (ಸಂಖ್ಯೆ 01437/01438) ವಿಶೇಷ ರೈಲುಗಳು ಡಿಸೆಂಬರ್ 13 ರಿಂದ ಫೆಬ್ರುವರಿ 17 ರ ವರೆಗೆ ವಾರಕ್ಕೊಮ್ಮೆ ವಯಾ ಬೀದರ್, ಹುಮನಾಬಾದ್, ಕಲಬುರಗಿ ಮಾರ್ಗವಾಗಿ ಚಲಿಸಲಿವೆ. ಶೀಘ್ರ ಇವುಗಳ ಸಂಪೂರ್ಣ ಮಾಹಿತಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಬೀದರ್- ಹುಮನಾಬಾದ್- ಕಲಬುರಗಿ ಮಾರ್ಗವಾಗಿ ಆದಷ್ಟು ಹೆಚ್ಚು ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು. ಈ ಮಾರ್ಗದಲ್ಲಿ ರೈಲುಗಳ ಸಂಚಾರದಿಂದ ಆಗುವ ಉಪಯೋಗಗಳ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಈ ಪ್ರಯುಕ್ತ ಸತತವಾಗಿ ವಿಶೇಷ ರೈಲುಗಳು ಚಲಿಸುತ್ತಿವೆ. ಸಾರ್ವಜನಿಕರು ರೈಲುಗಳ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.