ಖಟಕಚಿಂಚೋಳಿ: ಭಾಲ್ಕಿ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಖಟಕಚಿಂಚೋಳಿ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಬೇಕು ಎಂಬುದು ಗ್ರಾಮಸ್ಥರ ಬಹುದಿನಗಳ ಕನಸು ಇನ್ನೂ ನನಸಾಗಿಲ್ಲ.
ಖಟಕಚಿಂಚೋಳಿ ವ್ಯಾಪ್ತಿಗೆ ಚಳಕಾಪುರ, ಮಾಸಿಮಾಡ, ಡಾವರಗಾಂವ್, ಸುಲ್ತಾನಬಾದ್ ವಾಡಿ ಸೇರಿದಂತೆ ಹತ್ತಾರು ಹಳ್ಳಿಗಳು ಬರುತ್ತವೆ. ಹೀಗಾಗಿ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಪಿಯುಸಿ ಓದಲು ತಾಲ್ಲೂಕು, ಜಿಲ್ಲಾ ಕೇಂದ್ರಕ್ಕೆ ಹೋಗುವುದು ಅನಿವಾರ್ಯವಾಗಿದೆ.
ಗ್ರಾಮೀಣ ಪ್ರದೇಶದಿಂದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಕ್ಕೆ ಹೋಗಲು ಬಸ್ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳ ಕೊರತೆ ಇರುವುದು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಜನರು ತಮ್ಮ ಮಕ್ಕಳನ್ನು ದುಬಾರಿ ಹಣ ನೀಡಿ ಖಾಸಗಿ ಕಾಲೇಜಿಗೆ ಸೇರಿಸುತ್ತಿದ್ದಾರೆ.
’ಗ್ರಾಮದಲ್ಲಿ ಸರ್ಕಾರಿ ಕನ್ನಡ ಮತ್ತು ಉರ್ದು ಪ್ರೌಢ ಶಾಲೆಯಿದೆ. ಶಾಲೆಯಲ್ಲಿ ನೂರು ಮಕ್ಕಳು ಓದುತ್ತಾರೆ. ಹೀಗೆ ಇನ್ನಿತರ ಹಳ್ಳಿಗಳ ಪ್ರೌಢಶಾಲೆಯಲ್ಲಿ ಪ್ರತಿ ವರ್ಷ ಸುಮಾರು 400 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗುತ್ತಾರೆ. ಪ್ರೌಢ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ದೂರದ ಪಟ್ಟಣಗಳಿಗೆ ಹೋಗುತ್ತಿದ್ದಾರೆ. ಹೀಗಾಗಿ ಇಲ್ಲಿ ಕಾಲೇಜು ಮಂಜೂರು ಮಾಡುವುದು ಅವಶ್ಯವಾಗಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸುರೇಶ ಅಲ್ಲೂರೆ.
’ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದವರೇ ಹೆಚ್ಚಾಗಿ ವಾಸಿಸುತ್ತಾರೆ. ಅವರು ತಮ್ಮ ಮಕ್ಕಳಿಗೆ ಕಾಲೇಜು ಓದಿಸಲು ಜಿಲ್ಲಾ, ತಾಲ್ಲೂಕು ಕೇಂದ್ರಕ್ಕೆ ಕಳುಹಿಸಲು ಪರದಾಡುವಂತಾಗಿದೆ. ಇನ್ನೂ ಖಾಸಗಿ ಕಾಲೇಜುಗಳ ಶುಲ್ಕ ಗಗನಕ್ಕೇರಿದೆ. ಅದನ್ನು ಪಾವತಿಸಲು ಹರಸಾಹಸ ಪಡುವಂತಾಗಿದೆ. ಆದ್ದರಿಂದ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ’ ಎಂದು ಗ್ರಾಮದ ಹಿರಿಯರಾದ ರಾಮಚಂದ್ರ ಪಂಚಾಳ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗ್ರಾಮವು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರು ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಅವರು ಶಿಕ್ಷಣ ಪ್ರೇಮಿಯಾಗಿದ್ದಾರೆ. ಹೀಗಾಗಿ ಗ್ರಾಮದ ಜನತೆ ಪದವಿ ಪೂರ್ವ ಕಾಲೇಜು ಆರಂಭಿಸಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
ಹೋಬಳಿ ಮಟ್ಟದಲ್ಲಿ ಅನೇಕ ಪ್ರೌಢಶಾಲೆಗಳು ಪಿಯು ಶಿಕ್ಷಣಕ್ಕೆ ನಗರ, ಪಟ್ಟಣಕ್ಕೆ ಮೊರೆ ನನಸಾದೀತೆ ಖಟಕಚಿಂಚೋಳಿ ಪಿಯು ಕಾಲೇಜು ಕನಸು
ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಬೇಕು ಎನ್ನುವ ಯಾವುದೇ ಪ್ರಸ್ತಾವನೆ ಬಂದಿಲ್ಲ. ಅಲ್ಲದೇ ನೂತನ ಕಾಲೇಜು ಆರಂಭಿಸಬೇಕಾದರೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕಾಲೇಜು ಆರಂಭಿಸಲಾಗುತ್ತದೆಚಂದ್ರಕಾಂತ ಶಹಾಬಾದಕರ್ ಡಿಡಿಪಿಯು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.