ADVERTISEMENT

‘ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕೇ ಶಾಸಕರಾಗಿದ್ದೀರಿ’

ಡಾ.ಸಿದ್ದಲಿಂಗಪ್ಪ ಪಾಟೀಲ ವಿರುದ್ಧ ಲಕ್ಷ್ಮಣರಾವ್ ಬುಳ್ಳಾ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 4:57 IST
Last Updated 24 ಡಿಸೆಂಬರ್ 2025, 4:57 IST
ಲಕ್ಷ್ಮಣರಾವ್ ಬುಳ್ಳಾ. ಜಿಪಂ ಮಾಜಿ ಉಪಾಧ್ಯಕ್ಷ
ಲಕ್ಷ್ಮಣರಾವ್ ಬುಳ್ಳಾ. ಜಿಪಂ ಮಾಜಿ ಉಪಾಧ್ಯಕ್ಷ   

ಹುಮನಾಬಾದ್: ‘ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರು ಕಾಂಗ್ರೆಸ್ ಪಕ್ಷ ಮತ್ತು ರಾಜಶೇಖರ ಪಾಟೀಲ ಅವರಿಗೆ ಜೈಕಾರ  ಹಾಕಿಯೇ ಶಾಸಕರಾಗಿ ಆಯ್ಕೆಯಾಗಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ ಆರೋಪಿಸಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ಜಾತಿ (ಎಡ ಮತ್ತು ಬಲ) ಅಷ್ಟೇ ಜೈಕಾರ ಹಾಕಿಲ್ಲ, ನೀವೂ ಇಷ್ಟು ವರ್ಷ ನಮ್ಮ ಜತೆಗಿದ್ದು ಸಾಕಷ್ಟು ಜೈಕಾರ ಹಾಕಿದ್ದೀರಿ. ಈಗ ಬಿಜೆಪಿಗೆ ಹೋಗಿ ಶಾಸಕರಾಗಿದ್ದೀರಿ ಅಷ್ಟೇ. ಈಚೆಗೆ ನಡೆದ ಮಾದಾರ ಚನ್ನಯ್ಯ ಜಯಂತಿ ಕಾರ್ಯಕ್ರಮಲ್ಲಿ ನನ್ನ ಹೆಸರು ಮತ್ತು ಪ್ರಭು ತಾಳಮಡಗಿ ಅವರ ಹೆಸರು ಉಲ್ಲೇಖ ಮಾಡಿರುವುದು ಖಂಡನಾರ್ಹ. ನನಗೆ ಕಾಂಗ್ರೆಸ್ ಪಕ್ಷ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ, ಬಿ.‌ಎಸ್‌.‌ಎಸ್.ಕೆ  ನಿರ್ದೇಶಕ, ಪುರಸಭೆ ಸದಸ್ಯ ಸೇರಿದಂತೆ ಎಲ್ಲ ರೀತಿಯ ಅವಕಾಶ ನೀಡಿದೆ. ಇದನ್ನು ತಿಳಿಯದೆ ಮನಬಂದಂತೆ ಮಾತನಾಡುವುದು ಸರಿಯಲ್ಲ’ ಎಂದರು.‌

ADVERTISEMENT

‌ಮಾದಿಗ ಸಮಾಜದ ಮುಖಂಡ ಪ್ರಭು ತಾಳಮಡಗಿ ಮಾತನಾಡಿ, ‘ಮಾದಿಗ ಸಮುದಾಯವನ್ನು ಕಾಂಗ್ರೆಸ್ ಪಕ್ಷ ಕೇವಲ ಜೈಕಾರ ಹಾಕುವುದಕ್ಕೆ ಸೀಮಿತ ಮಾಡಿದೆ ಎಂದು ಶಾಸಕ ಸಿದ್ದಲಿಂಗಪ್ಪ ಪಾಟೀಲ ಹೇಳಿಕೆ ನೀಡಿರುವುದು ಖಂಡನೀಯ. ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ರಾಜಶೇಖರ ಪಾಟೀಲ ಅವರು ಮಾದಿಗ ಸಮುದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಎಲ್ಲ ಗ್ರಾಮಗಳಲ್ಲಿ ಸಮುದಾಯದ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ’ ಎಂದರು.‌

ಬಾಕ್ಸ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಓಂಕಾರ ತುಂಬಾ ಮಾತನಾಡಿ, ‘ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರಿಗೆ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ಅಭಿವೃದ್ಧಿ ಬಿಟ್ಟು ಜಾತಿಗಳ ‌ನಡುವೆ ಒಡೆದಾಡುವ ನೀತಿ ಅನುಸರಿಸುತ್ತಿದ್ದಾರೆ. ಕನಕದಾಸರ ಜಯಂತಿ ಕಾರ್ಯಕ್ರಮ ಒಂದೇ ಮಾಡಬಹುದಿತ್ತು. ಎರೆಡು ಕಾರ್ಯಕ್ರಮ ಮಾಡುವುದಕ್ಕೆ ಕಾರಣರಾಗಿದ್ದೀರಿ. ಮಾದಾರ ಚನ್ನಯ್ಯ ಜಯಂತಿಯನ್ನು ರಾಜಕೀಯ ಭಾಷಣಕ್ಕೆ ಸೀಮಿತ ಮಾಡಿಕೊಂಡು ಕಾಂಗ್ರೆಸ್ ನಾಯಕರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದೀರಿ. ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿದರೆ ನಿಮ್ಮ ಅಸ್ಥಿತ್ವ ಕಳೆದುಕೊಳ್ಳುವುದು ಖಚಿತವಾಗಿದೆ. ನಿಮ್ಮ ಮೂರು ವರ್ಷಗಳ ಅಧಿಕಾರ ಅವಧಿಯಲ್ಲಿ ಎಷ್ಟು ಜನ ದಲಿತರಿಗೆ ಕಾಮಗಾರಿ ಮಾಡುವುದಕ್ಕೆ ಬಿಟ್ಟಿದ್ದೀರಿ ಹೇಳಿ. ನಿಮ್ಮ ಕುಟುಂಬದ ಸದಸ್ಯರೇ ಎಲ್ಲ ಟೆಂಡರ್ ಹಾಕಿ ಕಾಮಗಾರಿ ಮಾಡುತ್ತಿದ್ದೀರಿ’ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಅಫ್ಸರಮಿಯ್ಯಾ, ಮಲ್ಲಿಕಾರ್ಜುನ ಮಾಶಟ್ಟಿ, ಉಮೇಶ್ ಜಮಗಿ, ಸುರೇಶ್ ಘಾಂಗ್ರೆ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.