ADVERTISEMENT

ಶಾಸಕರ ಮುಂದೆ ಗ್ರಾಮಸ್ಥರ ಅಹವಾಲು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 4:55 IST
Last Updated 24 ಡಿಸೆಂಬರ್ 2025, 4:55 IST
ಔರಾದ್ ತಾಲ್ಲೂಕಿನ ನಂದ್ಯಾಳದಲ್ಲಿ ನಡೆದ ಗ್ರಾಮ ಸಂಚಾರ ಸಭೆಯಲ್ಲಿ ಶಾಸಕ ಪ್ರಭು ಚವಾಣ್ ಜನರೊಂದಿಗೆ ಚರ್ಚಿಸಿದರು 
ಔರಾದ್ ತಾಲ್ಲೂಕಿನ ನಂದ್ಯಾಳದಲ್ಲಿ ನಡೆದ ಗ್ರಾಮ ಸಂಚಾರ ಸಭೆಯಲ್ಲಿ ಶಾಸಕ ಪ್ರಭು ಚವಾಣ್ ಜನರೊಂದಿಗೆ ಚರ್ಚಿಸಿದರು    

ಔರಾದ್: ‘ನಮ್ಮ ಊರಿಗೆ ಬಸ್ ನಿಲ್ದಾಣ, ಪಡಿತರ ಧಾನ್ಯ ವಿತರಣೆ ವ್ಯವಸ್ಥೆ, ಶುದ್ಧ ನೀರಿನ ಘಟಕ ಮಂಜೂರು ಮಾಡಿ’ ಎಂದು ತಾಲ್ಲೂಕಿನ ಗಡಿ ಗ್ರಾಮಸ್ಥರು ಬೇಡಿಕೆ ಮಂಡಿಸಿದರು.

ಶಾಸಕ ಪ್ರಭು ಚವಾಣ್ ನೇತೃತ್ವದಲ್ಲಿ ಮಂಗಳವಾರ ತಾಲ್ಲೂಕಿನ ಗಡಿ ಗ್ರಾಮ ನಂದ್ಯಾಳ, ನಾಗಮಾರಪಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಸಂಚಾರ ಸಭೆಯಲ್ಲಿ ‘ನಮ್ಮದು ಗಡಿ ಗ್ರಾಮ. ಇಲ್ಲಿ ಇಷ್ಟು ವರ್ಷವಾದರೂ ಬಸ್ ನಿಲ್ದಾಣ ಇಲ್ಲ. ಸಮರ್ಪಕ ಬಸ್ ಸೇವೆಯೂ ಸಿಗುವುದಿಲ್ಲ. ಆಸ್ಪತ್ರೆ ಕಟ್ಟಡ ಇದ್ದರೂ ಮೂಲ ಸೌಲಭ್ಯ ಹಾಗೂ ಸಿಬ್ಬಂದಿ ಇಲ್ಲ. ಜೆಜೆಎಂ ಕಾಮಗಾರಿ ಆದರೂ ಶುದ್ಧ ಕಡಿಯುವ ನೀರು ಸಿಗುವುದಿಲ್ಲ. ಶಾಲೆ ಮಕ್ಕಳಿಗೂ ಶಾಶ್ವತವಾಗಿ ಶುದ್ಧ ನೀರಿನ ವ್ಯವಸ್ಥೆ ಮಾಡಬೇಕಿದೆ’ ಎಂದು ಜನ ಸಮಸ್ಯೆ ಹೇಳಿಕೊಂಡರು.

‘ಬಸ್ ನಿಲ್ದಾಣಕ್ಕೆ ಸ್ಥಳಾವಕಾಶ ಕೊಟ್ಟರೆ ಅನುದಾನ ಕೊಡುತ್ತೇನೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳಿಗೂ ಅನುದಾನ ಮಂಜೂರಾಗಿದೆ. ಶಾಲಾ ಕಟ್ಟಡದ ವ್ಯವಸ್ಥೆ ಆಗಿದೆ. ಸಮುದಾಯ ಭವನ ಮಾಡಿಕೊಡುತ್ತೇನೆ. ಆದರೆ ಗ್ರಾಮದಲ್ಲಿ ನೀರಿನ ವ್ಯವಸ್ಥೆ, ಸ್ವಚ್ಛತೆ, ಬೀದಿ ದೀಪದಂತಹ ಸಣ್ಣಪುಟ್ಟ ಕೆಲಸ ಗ್ರಾಮ ಪಂಚಾಯಿತಿಯವರು ಮಾಡಬೇಕು’ ಎಂದು ಶಾಸಕರು ಎಂದು ತಿಳಿಸಿದರು.

ADVERTISEMENT

ನಮ್ಮ ಊರಿಗೆ ಇಲ್ಲಿಯ ತನಕ ಪಡಿತರ ಅಂಗಡಿ ವ್ಯವಸ್ಥೆ ಇಲ್ಲದೆ 2 ಕಿ.ಮೀ ನಡೆದುಕೊಂಡು ಪ್ರತಿ ತಿಂಗಳು ಪಡಿತರ ಧಾನ್ಯ ತರಲು ಹೋಗಬೇಕು ಎಂದು ಖಾಶೆಂಪೂರ ಗ್ರಾಮಸ್ಥರು ಗೋಳು ತೋಡಿಕೊಂಡರು. ಸ್ಥಳದಲ್ಲಿದ್ದ ಆಹಾರ ಇಲಾಖೆ ಅಧಿಕಾರಿಯನ್ನು ಕರೆಸಿದ ಶಾಸಕರು ಇವರಿಗೆ ಮುಂದಿನ ತಿಂಗಳಿನಿಂದ ಅವರ ಊರಿಗೆ ಹೋಗಿ ಪಡಿತರ ಧಾನ್ಯ ಹಂಚಿಕೆ ಮಾಡುವಂತೆ ಹೇಳಿದರು.

ತಹಶೀಲ್ದಾರ್ ಮಹೇಶ ಪಾಟೀಲ, ತಾ.ಪಂ ಇಒ ಕಿರಣ ಪಾಟೀಲ, ಮುಖಂಡ ವಸಂತ ವಕೀಲ, ಧೋಂಡಿಬಾ ನರೋಟೆ ಅಧಿಕಾರಿಗಳು, ಸ್ಥಳೀಯರು ಇದ್ದರು

ಗ್ರಾಮ ಸಂಚಾರ ಕಾಟಾಚಾರ ಅಲ್ಲ

‘ನಾನು ನಡೆಸುತ್ತಿರುವ ಗ್ರಾಮ ಸಂಚಾರ ಕಾಟಾಚಾರ ಅಲ್ಲ. ಜನರ ಬಳಿ ಹೋಗಿ ಅವರ ಸಮಸ್ಯೆ ಕೇಳಿ ಪರಿಹರಿಸುತ್ತಿದ್ದೇನೆ’ ಎಂದು ಶಾಸಕ ಪ್ರಭು ಚವಾಣ್ ನಾಗಮಾರಪಳ್ಳಿಯಲ್ಲಿ ಹೇಳಿದರು. ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿದ್ದು ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕೊಡುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ರದ್ದಾದ ಮಾಸಾಶನ ಪಡಿತರ ಚೀಟಿ ಪಹಣಿ ತಿದ್ದುಪಡಿ ಸೇರಿದಂತೆ ರೈತರು ಹಾಗೂ ಸಾರ್ವಜನಿಕರ ಅನೇಕ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಹೀಗಾಗಿ ಇದು ಕಾಟಾಚಾರ ಎನ್ನುವವರಿಗೆ ಸೂಕ್ತ ಉತ್ತರ ಸಿಕ್ಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.