ADVERTISEMENT

ಸಚಿವರ ತವರಲ್ಲಿ ಬಿತ್ತನೆ ಬೀಜಕ್ಕಾಗಿ ಅಲೆದಾಟ

ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 5:34 IST
Last Updated 17 ಜೂನ್ 2021, 5:34 IST
ಔರಾದ್ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಮಹಾಡೋಣಗಾಂವ್ ತಾಂಡಾ ಮಹಿಳೆಯರು, ರೈತರು ಪ್ರತಿಭಟನೆ ನಡೆಸಿದರು
ಔರಾದ್ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಮಹಾಡೋಣಗಾಂವ್ ತಾಂಡಾ ಮಹಿಳೆಯರು, ರೈತರು ಪ್ರತಿಭಟನೆ ನಡೆಸಿದರು   

ಔರಾದ್: ಸೋಯಾ ಬೀಜ ಸಿಗದೆ ಇಲ್ಲಿಯ ರೈತ ಸಂಪರ್ಕ ಕೇಂದ್ರದ ಎದುರು ಒಂದು ವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿದ ಮಹಾಡೋಣಗಾಂವ್ ತಾಂಡಾ ನಿವಾಸಿಗಳು ಬುಧವಾರ ಇಲ್ಲಿಯ ಕೃಷಿ ಇಲಾಖೆಯಸಹಾಯಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾಡೋಣಗಾಂವ್ ತಾಂಡಾ ನಿವಾಸಿ ರಮಣಬಾಯಿ ಶಂಕರ, ಅನುಷಾಬಾಯಿ ಕಾಶಿರಾಮ, ದೇವಲಾಬಾಯಿ ಸೇರಿದಂತೆ ಅನೇಕ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಗೆ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಗೌಡ ಬಣ) ಕಾರ್ಯಕರ್ತರು ಬೆಂಬಲಿಸಿದರು.

‘ಮಧ್ಯಾಹ್ನ 3.30ಕ್ಕೆ ನಡೆದ ಪ್ರತಿಭಟನೆ ವೇಳೆ ಕಚೇರಿಯಲ್ಲಿ ಒಬ್ಬರು ಗುಮಾಸ್ತರು ಹಾಗೂ ಕಂಪ್ಯೂಟರ್ ಆಪರೇಟರ್ ಹೊರತುಪಡಿಸಿ ಕೃಷಿ ಅಧಿಕಾರಿಗಳಾರೂ ಇರಲಿಲ್ಲ. ರೈತರು ಇಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳು
ಕಚೇರಿಗೆ ಬರುತ್ತಿಲ್ಲ. ಮೊಬೈಲ್ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ’ ಕರವೇ ಪ್ರಮುಖ ರಾಜು ಯಡವೆ ಆಗ್ರಹಿಸಿದರು.

ADVERTISEMENT

‘ತಾಲ್ಲೂಕಿಗೆ ಬಂದ ಸೋಯಾ ಬೀಜ ಕಾಳಸಂತೆಯಲ್ಲಿ ಮಾರಿಕೊಂಡಿದ್ದಾರೆ. ತಮಗೆ ಬೇಕಾದವರಿಗೆ ಹಾಗೂ ಪ್ರಭಾವಿಗಳಿಗೆ ಬೇಕಾದಷ್ಟು ಸೋಯಾ ಬೀಜ ಹಂಚಿದ್ದಾರೆ. ಇದರಿಂದಾಗಿ ಇತರೆ ರೈತರಿಗೆ ಬೀಜ ಸಿಕ್ಕಿಲ್ಲ’ ಎಂದು ಅವರು ಆಕ್ರೋಶ ಹೊರ ಹಾಕಿದರು.

‘ನಾವು ಮಹಾಡೋಣಗಾಂವ್ ತಾಂಡಾ ನಿವಾಸಿಗಳು. ಬೀಜಕ್ಕಾಗಿ ಕಳೆದ ಒಂದು ವಾರದಿಂದ ವಿತರಣಾ ಕೇಂದ್ರದ ಎದುರು ಕುಳಿತ್ತಿದ್ದೇವೆ. ಇಲ್ಲಿಯತನಕ ಯಾರೂ ನಮ್ಮ ಸಮಸ್ಯೆ ಕೇಳಲು ಬಂದಿಲ್ಲ’ ಎಂದು ತಾಂಡಾ ಮಹಿಳೆ ರಮಣಬಾಯಿ ಗೋಳು ತೋಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹಾಗೂ ಕೃಷಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದು ಚಾರೆ, ಅನೀಲ ದೇವಕತೆ, ಸುದೀಪ ಸಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.