ಬೀದರ್: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಅವರು ಸೋಮವಾರ ಗಡಿ ಜಿಲ್ಲೆ ಬೀದರ್ ಮೂಲಕ ರಾಜ್ಯದ ಮೊದಲ ವಕ್ಫ್ ಅದಾಲತ್ ಕುಂದು ಕೊರತೆ ಸಭೆ ಆರಂಭಿಸಿದರು.
ಪ್ರತಿ ತಿಂಗಳು ಮೂರು ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ನಡೆಸಿ, ಜನರ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ಒದಗಿಸಲಾಗುವುದು. ವಕ್ಪ್ ಆಸ್ತಿ ಯಾರದ್ದೂ ಅಲ್ಲ, ಅದು ಭಗವಂತನದು. ಅದನ್ನು ಯಾರೇ ಅತಿಕ್ರಮಿಸಿದರೂ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನಗರದ ಹೈದರಾಬಾದ್ ರಸ್ತೆಯ ಪಟೇಲ್ ಫಂಕ್ಷನ್ ಹಾಲ್‌ನಲ್ಲಿ ಸೋಮವಾರ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆ, ಕರ್ನಾಟಕ ರಾಜ್ಯ ಔಕಾಫ್ ಮಂಡಳಿ ಸಹಯೋಗದಲ್ಲಿ ಏರ್ಪಡಿಸಿದ್ದ ವಕ್ಪ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. 178 ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಅವರ ಸಮಸ್ಯೆ ಆಲಿಸಿದ ಸಚಿವರು, ವಕ್ಪ್ ಜಮೀನಿನ ಆಸ್ತಿ ಅತಿಕ್ರಮಣ, ಖಾತಾ ಬದಲಾವಣೆ, ಖಬರಸ್ತಾನಗಳಿಗೆ ಸಂಬಂಧಿಸಿದಂತೆ ಜನ ಹೆಚ್ಚಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಲಮಿತಿಯಲ್ಲಿ ಪರಿಹಾರ ಒದಗಿಸಲಾಗುವುದು ಎಂದು ಹೇಳಿದಾಗ ಕರತಾಡನ ಮುಗಿಲು ಮುಟ್ಟಿತು.
ಮುಸ್ಲಿಂ ಸಮುದಾಯದ ಜನರು ಹೆಚ್ವಿರುವ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಇಲ್ಲದಿದ್ದರೆ ಅಲ್ಲಿ ಸರ್ಕಾರಿ ಜಾಗವಿದ್ದಲಿ ಅದನ್ನು ಸ್ಮಶಾನ ಭೂಮಿಗೆ ಜಾಗ ನೀಡಲು ಅವಕಾಶವಿದೆ. ಕಲಬುರಗಿ, ಮಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಕಡೆ ಹಜ್ ಭವನಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಬೀದರ್ ಜಿಲ್ಲೆಗೆ ಮೂರು ದಿನ ಸಮಯ ನೀಡಿ ನಮ್ಮ ಜಿಲ್ಲೆಯ ವಕ್ಪ್ ಜಮೀನಿನ ಸಮಸ್ಯೆಗಳನ್ನು ಆಲಿಸುತ್ತಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಕೆಲಸ ಶ್ಲಾಘನಾರ್ಹವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ ಮಾತನಾಡಿ, ಸ್ಮಶಾನ ಭೂಮಿ ಹಾಗೂ ಮಸೀದಿಗಳ ಸಮಸ್ಯೆಗಳನ್ನು ತೆಗೆದುಕೊಂಡು ಅನೇಕರು ಅರ್ಜಿಗಳನ್ನು ಕೊಟ್ಟಿದ್ದಾರೆ. ವಕ್ಪ್ ಆಸ್ತಿ ಬಹಳಷ್ಟು ಕಡೆ ಅತಿಕ್ರಮಿಸಲಾಗಿದೆ. ಅವುಗಳಿಗೆ ಸರ್ಕಾರ ಪರಿಹಾರ ಕಲ್ಪಿಸಲಿದೆ ಎಂದರು.
ವಕ್ಪ್ ಬೋರ್ಡ್ ರಾಜ್ಯ ಘಟಕದ ಅಧ್ಯಕ್ಷ ಅನ್ವರ್ ಬಾಷಾ ಮಾತನಾಡಿ, ಜನ ಪ್ರತಿಯೊಂದಕ್ಕೂ ಬೆಂಗಳೂರಿಗೆ ಅಲೆಯುವಂತಾಗಬಾರದು ಎಂಬ ಕಾರಣಕ್ಕಾಗಿ ವಕ್ಫ್ ಅದಾಲತ್ ಜಿಲ್ಲಾಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
ನಗರಸಭೆ ಅಧಕ್ಷ ಮಹಮ್ಮದ್ ಗೌಸ್, ಬೀದರ್ ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಫಿರೋಜ್ ಖಾನ್, ಕಾಂಗ್ರೆಸ್ ಮುಖಂಡರಾದ ಅಯಾಜ್ ಖಾನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.