ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್: ‘ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ (ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿ) ಇ–ಖಾತಾ ಪಡೆಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ವಾರ್ಡ್‌ವಾರು ಮೇಳ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಆಯಾ ವಾರ್ಡ್‌ಗಳಲ್ಲಿ ಇ–ಖಾತಾ ವಿತರಣೆಯ ಪ್ರಕ್ರಿಯೆ ಮುಗಿಸಲು ನಮ್ಮ ಸಿಬ್ಬಂದಿ ಖುದ್ದಾಗಿ ಅಲ್ಲಿ ಬರುವರು. ಇ–ಖಾತಾ ಮೇಳ ಆಯೋಜಿಸಿ, ಅಗತ್ಯ ದಾಖಲೆಗಳನ್ನು ಸಾರ್ವಜನಿಕರು ಅಲ್ಲಿ ಸಲ್ಲಿಸಬೇಕು. ಸರ್ಕಾರ ನಿಗದಿಪಡಿಸಿದ ₹200 ಶುಲ್ಕ ತುಂಬಬೇಕು. ಏಳು ದಿನಗಳ ಒಳಗೆ ಜನರಿಗೆ ಡಿಜಿಟಲ್ ಖಾತಾ ಸಿಗಲಿದೆ. ಮೇಳಗಳಲ್ಲಿ ಸಕ್ರಿಯ ನಾಗರಿಕ ಗುಂಪು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರನ್ನು ಸೇರಿಸಿಕೊಳ್ಳಲಾಗುವುದು. ಶೀಘ್ರದಲ್ಲೇ ಸಹಾಯವಾಣಿ ಆರಂಭಿಸಲಾಗುವುದು. ವಾಟ್ಸ್ಯಾಪ್ ನಂಬರ್ ಸಹ ಬಿಡುಗಡೆ ಮಾಡಲಾಗುವುದು. ಏನಾದರೂ ಸಮಸ್ಯೆಗಳಿದ್ದರೆ ನಾಗರಿಕರು ತಿಳಿಸಬಹುದು. ಈಗಾಗಲೇ ಈ ಬಗ್ಗೆ ಎಲ್ಲೆಡೆ ಧ್ವನಿವರ್ಧಕಗಳ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಬೀದರ್ ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅಧಿಕೃತ ಮತ್ತು ಅನಧಿಕೃತ ಆಸ್ತಿಗಳಿಗೆ ತಂತ್ರಾಂಶದಲ್ಲಿ ಇ–ಖಾತಾ ನೀಡಲು ಅವಕಾಶ ಕಲ್ಪಿಸಲಾಗಿದೆ. 2024ರ ಸೆಪ್ಟೆಂಬರ್ 10ರ ಪೂರ್ವದಲ್ಲಿ ನೋಂದಣಿ ಆಗಿರುವ ಅನಧಿಕೃತ ಸ್ವತ್ತುಗಳು ‘ಬಿ’ ಖಾತಾ ಪಡೆಯಲು ಅವಕಾಶ ನೀಡಲಾಗಿದೆ. ಬೀದರ್ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 1,35,839 ಅಧಿಕೃತ ಮತ್ತು ಅನಧಿಕೃತ ಆಸ್ತಿಗಳಿವೆ ಎಂದು ಮಾಹಿತಿ ಹಂಚಿಕೊಂಡರು.
ಸ್ವತ್ತುಗಳ ಮಾಲೀಕರು ‘ಎ’ ಮತ್ತು ‘ಬಿ’ ಖಾತಾ ಪಡೆಯಲು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಅರ್ಜಿ ಪಡೆದು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಇ–ಖಾತಾ ವಿತರಿಸಲಾಗುತ್ತದೆ. ‘ಬಿ’ ಖಾತಾ ಸೌಲಭ್ಯ ಪಡೆಯಲು ಸ್ವತ್ತಿನ ಮಾಲೀಕರಿಗೆ ಮೂರು ತಿಂಗಳ ಗಡುವು ನೀಡಲಾಗಿದೆ ಎಂದು ಹೇಳಿದರು.
‘ಬಿ’ ಖಾತಾ ಪಡೆಯುವ ಆಸ್ತಿ ಮಾಲೀಕರಿಗೆ ಮೊದಲ ಸಲ ಸ್ವತ್ತಿಗೆ ಎರಡು ಪಟ್ಟು ತೆರಿಗೆ ವಿಧಿಸಲಾಗುತ್ತದೆ. ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆ ಮಾತ್ರ ವಿಧಿಸಲಾಗುತ್ತದೆ. ಜಿಲ್ಲೆಯಾದ್ಯಂತ 18 ಸಾವಿರ ಅನಧಿಕೃತ ಆಸ್ತಿಗಳಿರುವುದು ಗೊತ್ತಾಗಿದೆ ಎಂದು ತಿಳಿಸಿದರು.
ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ ದಾನಪತ್ರ/ ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ಮಂಜೂರಾತಿ ಪತ್ರಗಳು/ ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ.
ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡ ಬಡಾವಣೆ ದೃಢೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರ.
ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ.
ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ.
ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ.
ಮಾಲೀಕರ ಗುರುತಿನ ದಾಖಲೆ ಪ್ರತಿ.
ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ 2024ರ ಸೆಪ್ಟೆಂಬರ್ 10ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ ದಾನಪತ್ರ/ವಿಭಾಗ ಪತ್ರಗಳು/ ಹಕ್ಕು ಖುಲಾಸೆ ಪತ್ರಗಳು.
ಪ್ರಸಕ್ತ ಸಾಲಿನ ವರೆಗೆ ಋಣಭಾರ ಪ್ರಮಾಣ ಪತ್ರ.
ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ.
ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ.
ಮಾಲೀಕರ ಗುರುತಿನ ದಾಖಲೆ ಪ್ರತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.