ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿರುವಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ವಿಸ್ತಾರವಾಗುತ್ತಿದೆ. ಸದ್ಯ ಬೀದರ್ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ? ಕುಡಿಯುವ ನೀರಿಗೆ ಜನ ಏನು ಮಾಡುತ್ತಿದ್ದಾರೆ? ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಏನು ಮಾಡುತ್ತಿದೆ? ಇದರ ಮೇಲೆ ಬೆಳಕು ಚೆಲ್ಲಲು ‘ಪ್ರಜಾವಾಣಿ’ ‘ಜಲ ದಾಹ’ ಶೀರ್ಷಿಕೆಯಡಿ ಸೋಮವಾರದಿಂದ ಸರಣಿ ವರದಿಗಳನ್ನು ಪ್ರಕಟಿಸಲಿದೆ. ಇದರ ಮೊದಲ ವರದಿ ಇಂದು ಪ್ರಕಟಗೊಂಡಿದೆ...
ಬೀದರ್: ಮೇ ತಿಂಗಳ ಹೊಸ್ತಿಲಲ್ಲಿರುವಾಗಲೇ ಜಿಲ್ಲೆಯ 58 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಆದರೆ, ಈಗಾಗಲೇ ಸಮಸ್ಯೆ ಇರುವ ಗ್ರಾಮಗಳಿಗೆ ನಿತ್ಯ ಟ್ಯಾಂಕರ್ ಹಾಗೂ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಗ್ರಾಮಗಳಿಗೆ ಟ್ಯಾಂಕರ್ ಪ್ರವೇಶಿಸುತ್ತಿದ್ದಂತೆ ಜನ ಪ್ಲಾಸ್ಟಿಕ್ ಕೊಡಗಳೊಂದಿಗೆ ಮುತ್ತಿಕೊಳ್ಳುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಟ್ಯಾಂಕರ್ ಖಾಲಿಯಾಗುತ್ತಿದೆ. ಇದು ಸದ್ಯದ ಚಿತ್ರಣ.
ಈ ಹಿಂದಿನಂತೆ ಈ ಸಲವೂ ಔರಾದ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸಮಸ್ಯೆ ಉಲ್ಬಣಿಸಿದೆ. ಪ್ರಮುಖ ನೀರಿನ ಮೂಲಗಳು ಇಲ್ಲದಿರುವುದು, ಕೆರೆ ತುಂಬಿಸುವ ಯೋಜನೆ ಇನ್ನಷ್ಟೇ ಆರಂಭವಾಗಬೇಕಿದೆ. ಮಳೆಯನ್ನೇ ಈ ತಾಲ್ಲೂಕು ಸಂಪೂರ್ಣ ಅವಲಂಬಿಸಿದ್ದು, ಬೇಸಿಗೆಯ ಆರಂಭದಲ್ಲೇ ಹೆಚ್ಚಿನ ಜಲಮೂಲಗಳು ಬತ್ತಿ ಹೋಗಿದ್ದವು. ಈಗ ಔರಾದ್ ತಾಲ್ಲೂಕಿನ 20 ಜನವಸತಿಗಳಲ್ಲಿ ಗಂಭೀರ ನೀರಿನ ಸಮಸ್ಯೆ ಉದ್ಭವಿಸಿದೆ. ಮೇ ತಿಂಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ವತಃ ಜಿಲ್ಲಾ ಪಂಚಾಯಿತಿ ಅಧಿಕಾರಿಗಳೇ ತಿಳಿಸಿದ್ದಾರೆ.
ನೀರಿನ ಸಮಸ್ಯೆಯಲ್ಲಿ ಔರಾದ್ ನಂತರದ ಸ್ಥಾನ ಕಮಲನಗರಕ್ಕಿದೆ. ತಾಲ್ಲೂಕಿನ 16 ಜನವಸತಿಗಳಲ್ಲಿ ನೀರಿನ ಸಮಸ್ಯೆ ಇದೆ. ಇದಾದ ನಂತರ ಭಾಲ್ಕಿ, ಬಸವಕಲ್ಯಾಣ ಕ್ರಮವಾದ ಸ್ಥಾನ ಪಡೆದಿವೆ. ಬೀದರ್ ತಾಲ್ಲೂಕಿನಲ್ಲಿ ಅತಿ ಕಡಿಮೆ ಇದೆ. ಒಂದು ಜನವಸತಿ ಪ್ರದೇಶದಲ್ಲಷ್ಟೇ ಸಮಸ್ಯೆ ಇರುವುದನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳಲಾಗಿದೆ.
ಇನ್ನು, ಜಿಲ್ಲೆಯ ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ ಯಾವುದೇ ಜನವಸತಿ ಪ್ರದೇಶಗಳಲ್ಲಿ ನೀರಿಗಾಗಿ ಹೇಳಿಕೊಳ್ಳುವಂತಹ ಸಮಸ್ಯೆ ಉದ್ಭವಿಸಿಲ್ಲ. ಆದರೆ, ಮೇ ತಿಂಗಳಲ್ಲಿ ಕೆಲವು ಕಡೆ ನೀರಿಗೆ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದ್ದು, ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜೂನ್ ಆರಂಭದಲ್ಲಿ ಸಕಾಲಕ್ಕೆ ಮಳೆಯಾಗದಿದ್ದರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.