ADVERTISEMENT

ಬೀದರ್‌| ನೀರಿಲ್ಲದೆ ಬಾಯಾರಿದ ಬಡಾವಣೆ

ಕುಮಾರ ಚಿಂಚೋಳಿ: ತುಕ್ಕು ಹಿಡಿದ ಕೊಳವೆಬಾವಿಗಳು, ರಣ ಬಿಸಿಲಲ್ಲಿ ನೀರಿಗಾಗಿ ಮಹಿಳೆಯರ ಸರತಿ ಸಾಲು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 9:16 IST
Last Updated 16 ಏಪ್ರಿಲ್ 2020, 9:16 IST
ಹುಮನಾಬಾದ್‍ನ ಕುಮಾರ ಚಿಂಚೋಳಿ ಗ್ರಾಮದಲ್ಲಿ ನೀರು ಹಿಡಿಯಲು ಕಾಯುತ್ತಿರುವ ಮಹಿಳೆಯರು
ಹುಮನಾಬಾದ್‍ನ ಕುಮಾರ ಚಿಂಚೋಳಿ ಗ್ರಾಮದಲ್ಲಿ ನೀರು ಹಿಡಿಯಲು ಕಾಯುತ್ತಿರುವ ಮಹಿಳೆಯರು   

ಹುಮನಾಬಾದ್: ತಾಲ್ಲೂಕಿನ ಸುಲ್ತಾನಾಬಾದ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಾರ ಚಿಂಚೋಳಿ ಗ್ರಾಮದ ಕೆಲ ಬಡಾವಣೆಗಳಲ್ಲಿ ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಬರುತ್ತಿಲ್ಲ. ಗ್ರಾಮಸ್ಥರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಮಾರ ಚಿಂಚೋಳಿ ಗ್ರಾಮದ ವಾರ್ಡ್‌ 1 ಮತ್ತು 2 ರ ಬಸವೇಶ್ವರ ವೃತ್ತ, ಪೀರಾಪಾಶಾ ಬಡಾವಣೆಯಲ್ಲಿ ಒಂದು ತಿಂಗಳಿಂದ ಸಮರ್ಪಕವಾಗಿ ನೀರು ಬರದೆ ನಿವಾಸಿಗಳು ದಿನನಿತ್ಯ ಸುಡು ಬಿಸಿಲನ್ನೂ ಲೆಕ್ಕಿಸದೇ ಇಲ್ಲಿರುವ ಕಿರುನೀರು ಸರಬರಾಜು ಟ್ಯಾಂಕ್‍ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಇಲ್ಲಿ ಸುಮಾರು 150 ಮನೆಗಳಿವೆ. ಎರಡು ಸಾವಿರಕ್ಕೂ ಹೆಚ್ಚಿನ ಜನ ವಾಸವಾಗಿದ್ದಾರೆ. ಒಟ್ಟು 11 ಕೊಳವೆ ಬಾವಿಗಳಿವೆ. ಇದರಲ್ಲಿ ಎರಡು ಹೊಸ ಕೊಳವೆಬಾವಿಗಳು. ಅವುಗಳಿಗೆ ಇನ್ನೂ ಮೋಟರ್ ಅಳವಡಿಸಿ ನೀರಿನ ಸಂಪರ್ಕ ಕಲ್ಪಿಸಿಲ್ಲ.

ADVERTISEMENT

ಇನ್ನುಳಿದ 9 ಕೊಳವೆ ಬಾವಿಗಳಲ್ಲಿ 6 ಸಂಪೂರ್ಣವಾಗಿ ಕೆಟ್ಟು ಹೋಗಿವೆ. 3 ಕೊಳವೆ ಬಾವಿಗಳಿಂದ ಮಾತ್ರ ನೀರು ಸರಬರಾಜು ಆಗುತ್ತಿದೆ. ಕಾರಣ ಗ್ರಾಮಸ್ಥರಿಗೆ ಸಮಪರ್ಕವಾಗಿ ಶುದ್ದ ಕುಡಿಯುವ ನೀರು ಸಿಗದೆ ದಿನನಿತ್ಯ ಬಿಸಿಲಲ್ಲಿ ನೀರಿಗಾಗಿ ಕಾಯುತ್ತಿದ್ದಾರೆ.

ಇಲ್ಲಿನ ಪೀರಾಪಾಶಾ, ಬಸವೇಶ್ವರ ದೇವಸ್ಥಾನದ ಹತ್ತಿರದ ಕೆಲ ಬಡಾವಣೆಯಲ್ಲಿನ ಕೊಳವೆ ಬಾವಿಗಳು ಕೆಟ್ಟಿರುವುದರಿಂದ ಬೇರೆ ಬಡಾವಣೆಯಲ್ಲಿರುವ ಕೊಳವೆ ಬಾವಿಗಳಿಂದ ಪೀರಾಪಾಶಾ ಬಡಾವಣೆಯಲ್ಲಿರುವ ಕಿರು ನೀರು ಸರಬರಾಜು ಟ್ಯಾಂಕ್‌ಗೆ ನೀರಿನ ಸಂಪರ್ಕ
ಕಲ್ಪಿಸಿಕೊಡಲಾಗಿದೆ.

ಕೊರೊನಾ ಭೀತಿಯ ಮಧ್ಯೆ ಇಲ್ಲಿನ ಜನ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು, ಕುಡಿಯುವ ನೀರು ಪಡೆಯುತ್ತಿರುವುದು ಸಾಮಾನ್ಯವಾಗಿದೆ.

ಇಲ್ಲಿನ ಹನುಮಾನ ದೇವಸ್ಥಾನದ ಹತ್ತಿರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ
ಅಭಿವೃದ್ಧಿ ನಿಗಮದ ವತಿಯಿಂದ ಹಾಗೂ ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಎರಡು ವರ್ಷಗಳಿಂದ ಅವು ಸಹ ಕೆಟ್ಟು ನಿಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.