ADVERTISEMENT

ಭಾಲ್ಕಿ: ರೇಲ್ವೆ ಸೇತುವೆ ಕೆಳಗಿನ ನೀರು ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 14:04 IST
Last Updated 24 ಜುಲೈ 2023, 14:04 IST
ಖಟಕಚಿಂಚೋಳಿ ಸಮೀಪದ ಕಣಜಿ ಗ್ರಾಮದಿಂದ ರುದನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ನೀರು ನಿಂತಿರುವುದು
ಖಟಕಚಿಂಚೋಳಿ ಸಮೀಪದ ಕಣಜಿ ಗ್ರಾಮದಿಂದ ರುದನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ನೀರು ನಿಂತಿರುವುದು    

ಖಟಕಚಿಂಚೋಳಿ: ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಿಂದ ರುದನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ನಿಂತು ಸುಗಮ ಸಂಚಾರಕ್ಕೆ ತೊಡಕಾಗಿದೆ.

ಕಲಬುರಗಿ-ಬೀದರ್ ರೈಲ್ವೆ ಹಳಿಯ ಕೆಳಗಡೆಯಿಂದ ರಸ್ತೆ ನಿರ್ಮಿಸಲಾಗಿದೆ. ಆದರೆ ಸೇತುವೆ ಕೆಳಗಡೆ ತಗ್ಗು ಇರುವುದರಿಂದ ಮಳೆ ಬಂದರೆ ನೀರು ಅಲ್ಲಿಯೇ ಸಂಗ್ರಹವಾಗುತ್ತದೆ. ನೀರು ಸರಾಗವಾಗಿ ಹೋಗಲು ಯಾವುದೇ ಮಾರ್ಗವಿಲ್ಲ. ಇದರಿಂದ ಕಣಜಿ ಗ್ರಾಮದಿಂದ ಕೇವಲ 2 ಕಿ.ಮೀ ದೂರದಲ್ಲಿರುವ ರುದನೂರ ಗ್ರಾಮಕ್ಕೆ ಹೋಗಬೇಕಾದರೆ 15ಕಿ.ಮೀ ಸುತ್ತುವರಿದು ಹೋಗುವಂತಾಗಿದೆ' ಎಂದು ಪ್ರಯಾಣಿಕರು ಬೇಸರ ವ್ಯಕ್ತ‌ಪಡಿಸುತ್ತಾರೆ.

’ಪ್ರತಿ ದಿನ ಬೆಳಗಾದರೆ ನಾನು ಕಣಜಿ, ರುದನೂರ, ಬ್ಯಾಲಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಪತ್ರಿಕೆ ಹಾಕುತ್ತೇನೆ. ಆದರೆ ರೇಲ್ವೆ ಸೇತುವೆ ಕೆಳಗಡೆ ನೀರು ನಿಂತಿರುವುದರಿಂದ ಅದರಲ್ಲಿ ಹಾವು ಸೇರಿದಂತೆ ಇನ್ನಿತರ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಅಲ್ಲಿಂದ ಹಾದು ಹೋಗಲು ಅಂಜಿಕೆಯಾಗುತ್ತಿದೆ ಎಂದು ಪತ್ರಿಕಾ ವಿತರಕ ಶಿವಕುಮಾರ ಖಾಶೆಂಪುರ ಆತಂಕ ವ್ಯಕ್ತಪಡಿಸುತ್ತಾರೆ.

ADVERTISEMENT

'ಸೇತುವೆ ಕೆಳಗಡೆ ನೀರು ನಿಲ್ಲುತ್ತಿರುವುದರಿಂದ ಸುತ್ತುವರಿದು ಹೋಗುತ್ತಿದ್ದೇನೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಅಲ್ಲದೇ ದುಡ್ಡು ಉಳಿಯುತ್ತಿಲ್ಲ. ಕೆಲವು ಬಾರಿ ನೀರಿನಲ್ಲೇ ಹೋಗಿ ಪತ್ರಿಕೆಗಳು ನೀರಿನಲ್ಲಿ ಬಿದ್ದಿವೆ. ಇದರಿಂದ ಸಂಪೂರ್ಣ ನಷ್ಟವಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ರೇಲ್ವೆ ಸೇತುವೆ ಕೆಳಗಡೆ ಸಂಗ್ರಹವಾಗಿರುವ ನೀರನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ನೆರವಾಗಬೇಕು' ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.