
ಔರಾದ್: ದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸುವ ‘ಹರ್ ಘರ್ ಜಲ್’ ಯೋಜನೆ ಕುರಿತು ತಾಲ್ಲೂಕಿನ ಬೋರಾಳ ಗ್ರಾಮದ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮಾರು 400 ಮನೆಗಳಿರುವ ಈ ಊರಲ್ಲಿ ₹1 ಕೋಟಿ ವೆಚ್ಚದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕಾಗಿ ಪ್ರತ್ಯೇಕ ನೀರು ಸಂಗ್ರಹ ಟ್ಯಾಂಕ್ ಇದೆ, ಎಲ್ಲ ಕಡೆ ಪೈಪ್‌ಲೈನ್ ಕೂಡ ಆಗಿದೆ. ಆದರೆ ಬಹುತೇಕ ಮನೆಗಳ ಎದುರಿನ ಜೆಜೆಎಂ ನಳ ಸಂಪರ್ಕ ಹಾಗೂ ಫಲಕಗಳು ಕಿತ್ತು ಹೋಗಿವೆ. ಕೆಲ ಕಡೆ ನೀರು ಬೇಕಾಬಿಟ್ಟಿ ಹರಿಯುತ್ತಿದ್ದರೆ ಮತ್ತೆ ಕೆಲವರಿಗೆ ನೀರೇ ಬರುತ್ತಿಲ್ಲ. ಹೀಗಾಗಿ ಗ್ರಾಮದ ಬಹುತೇಕರು ನಮಗೆ ಜೆಜೆಎಂ ಬದಲು ಹಳೆ ನೀರಿನ ವ್ಯವಸ್ಥೆ ಚೆನ್ನಾಗಿದೆ. ಅದೇ ನಮಗೆ ಉಪಯೋಗವಾಗುತ್ತಿದೆ ಎನ್ನುತ್ತಿದ್ದಾರೆ.
‘ನಮಗೆ ಜೆಜೆಎಂ ಎಲ್ಲಿದೆ ಗೊತ್ತಿಲ್ಲ. ನಮ್ಮ ಮನೆ ಬಳಿ ಒಂದು ಕೊಳವೆ ಬಾವಿ ಇದ್ದು, ಈ ನೀರು ಗ್ರಾಮದ 100ಕ್ಕೂ ಹೆಚ್ಚು ಮನೆಗಳಿಗೆ ಪೂರೈಕೆಯಾಗುತ್ತಿದೆ’ ಎಂದು ಬೋರಾಳ ನಿವಾಸಿ ದಿಲೀಪ ಮಚಕೂರೆ ಹೇಳಿದರೆಮ ‘ನಮ್ಮ ಮನೆ ಎದುರು ಜೆಜೆಎಂ ನಳದ ಜತೆ ಫಲಕ ಅಳವಡಿಸಿದ್ದಾರೆ. ಆದರೆ ಅದಕ್ಕೆ ನೀರೇ ಬರುತ್ತಿಲ್ಲ’ ಎಂದು ಇದೇ ಗ್ರಾಮದ ನಿವಾಸಿ ಭಾರತಬಾಯಿ ತಿಳಿಸಿದ್ದಾರೆ.
‘ನಮ್ಮ ಬಡಾವಣೆಯಲ್ಲಿ ಕೆಲವು ತಿಂಗಳ ಹಿಂದೆ ಜೆಜೆಎಂ ನಳದ ಸಂಪರ್ಕ ಕೊಟ್ಟಿದ್ದಾರೆ. ಆದರೆ ಇಂದಿಗೂ ನೀರು ಬಂದಿಲ್ಲ. ಹಳೆ ನಳದ ನೀರು ಬಳಸಿಕೊಳ್ಳುತ್ತಿದ್ದೇವೆ’ ಎಂದು ಗೌತಮ ನಗರ ನಿವಾಸಿ ಗುಂಡಪ್ಪ ಸೂರ್ಯವಂಶಿ ಹಾಗೂ ವೈಜಿನಾಥ ಕಾಂಬಳೆ ಹೇಳುತ್ತಾರೆ.
ಬೋರಾಳ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾಗಿದೆ. ಪೂರ್ಣ ಪರಿಶೀಲನೆ ಮಾಡದೆ ಹಸ್ತಾಂತರ ಮಾಡಿಕೊಳ್ಳಬಾರದು ಎಂದು ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಹಾಗೂ ಪಿಡಿಒಗೆ ಮಾಹಿತಿ ನೀಡಿದರೂ ಅವರು ಹಸ್ತಾಂತರ ಮಾಡಿಕೊಂಡಿದ್ದಾರೆ. ಈ ಕುರಿತು ಜಿ.ಪಂ ಸಿಇಒ ಅವರಿಗೆ ದೂರು ನೀಡಿದ್ದೇನೆಲಕ್ಷ್ಮಣ ದೇವಕತೆ, ರಾಜಾಧ್ಯಕ್ಷ, ಅಹಿಂದ ಯುವ ಘಟಕ
ನಮ್ಮ ಊರಲ್ಲಿ ಜೆಜೆಎಂ ಕಾಮಗಾರಿ ಸರಿಯಾಗಿ ಆಗಿಲ್ಲ. ಪೈಪ್‌ಲೈನ್ ವ್ಯವಸ್ಥೆ ಸರಿ ಇಲ್ಲ. ಬಾವಿ ಕೊರೆದಿಲ್ಲ. ಟ್ಯಾಂಕ್ ಕಟ್ಟಿದರೂ ಅದು ಉಪಯೋಗಕ್ಕೆ ಬರುತ್ತಿಲ್ಲ. ಕಾಮಗಾರಿ ಪೂರ್ಣವಾಗಿದಿದ್ದರೂ ಗ್ರಾಮ ಪಂಚಾಯಿತಿಯವರು ಹಸ್ತಾಂತರ ಮಾಡಿಕೊಂಡಿದ್ದಾರೆಉಮಾಕಾಂತ ಸೋನೆ, ಬೋರಾಳ ಗ್ರಾಮದ ನಿವಾಸಿ, ದಲಿತ ಸೇನೆ ತಾಲ್ಲೂಕು ಅಧ್ಯಕ್ಷ
ಬೋರಾಳದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು ಕೆಲವೊಂದು ಮನೆ ಹೊರತುಪಡಿಸಿ ಎಲ್ಲ ಮನೆಗಳಿಗೆ ನೀರು ಹೋಗುತ್ತಿದೆ. ಕೆಲ ಕಡೆ ಜಾನುವಾರು ಓಡಾಟದಿಂದ ನಲ್ಲಿಗಳು ಕಿತ್ತು ಹೋಗಿವೆ. ಅವು ಸರಿಪಡಿಸಲು ಗುತ್ತಿಗೆದಾರರಿಗೆ ಹೇಳಿದ್ದೇವೆವಿಜಯಲಕ್ಷ್ಮಿ, ಪಿಡಿಒ, ಎಕಲಾರ ಗ್ರಾ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.