ADVERTISEMENT

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮ

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ: ಶಾಸಕ ರಾಜಶೇಖರ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 5:41 IST
Last Updated 11 ಜನವರಿ 2023, 5:41 IST
ಹುಮನಾಬಾದ್ ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಿಗೆ ಶಾಸಕ ರಾಜಶೇಖರ ಪಾಟೀಲ ಚಾಲನೆ ನೀಡಿದರು
ಹುಮನಾಬಾದ್ ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಿಗೆ ಶಾಸಕ ರಾಜಶೇಖರ ಪಾಟೀಲ ಚಾಲನೆ ನೀಡಿದರು   

ಹುಮನಾಬಾದ್: ‘ಪಟ್ಟಣ ಸೇರಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯ ₹5.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದರೂ ಪಟ್ಟಣದ ನಾಗರಿಕರಿಗೆ ಸಮಯಕ್ಕೆ ಸರಿಯಾಗಿ ನೀರು ಸಿಗದಿರುವುದು ಬೇಸರದ ಸಂಗತಿ ಎಂದರು.
ಬೀದರ್ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗೆ ಬಿಎಸ್‌ಎಸ್‌ಕೆ ಕಾರ್ಖಾನೆ ಕುರಿತು ಚರ್ಚಿಸಿದ್ದೇನೆ. ಅದಕ್ಕೆ ಮುಖ್ಯಮಂತ್ರಿಗಳು ಸಹ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದರು.
ತಿರುಗೇಟು: ಪಂಚರತ್ನ ಯಾತ್ರೆ ವೇಳೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ನೀಡಿದ್ದ,‘ಬಸವರಾಜ ಪಾಟೀಲ ಹಾಗೂ ಶಾಸಕ ರಾಜಶೇಖರ ಪಾಟೀಲ ಅವರನ್ನು ಗೆಲ್ಲಿಸಿದ್ದೇನೆ. ಹೀಗಾಗಿ ನನ್ನ ಉಪಕಾರ ನಿಮ್ಮ ಮೇಲೆ ಇದೆ. ನನ್ನ ಮಗನಿಗಾಗಿ ಕ್ಷೇತ್ರ ತ್ಯಜಿಸಿದರೆ ನಿಜವಾದ ಶರಣರಾಗುತ್ತೀರಿ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ರಾಜಶೇಖರ ಪಾಟೀಲ,‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧೆಸುವ ಹಕ್ಕು ಇದೆ. ಆದರೆ ಸುಳ್ಳು ಮಾತುಗಳನ್ನು ಹೇಳಿ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಚುನಾವಣೆ ಎದುರಿಸಿ ಗೆಲ್ಲಿ’ ಎಂದು ಅವರು ಹೇಳಿದರು.

ADVERTISEMENT

ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ‌, ಪುರಸಭೆ ಅಧ್ಯಕ್ಷರಾದ ನೀತು ಶರ್ಮಾ, ಉಪಾಧ್ಯಕ್ಷೆ ಸತ್ಯವತಿ ಮಠಪತಿ, ಹಳ್ಳಿಖೇಡ ಬಿ. ಪುರಸಭೆ ಅಧ್ಯಕ್ಷ ನಾಗರಾಜ ಹಿಬಾರೆ, ಮುಖ್ಯಾಧಿಕಾರಿ ಶಿವರಾಜ ರಾಠೋಡ, ಸದಸ್ಯರಾದ ಅಫ್ಸರ್ ಮಿಯ್ಯಾ, ಗೋರೆ ಮಿಯ್ಯಾ, ಸುನಿಲ ಪಾಟೀಲ, ರಮೇಶ ಕಲ್ಲೂರ ಸೇರಿದಂತೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.