ADVERTISEMENT

ಕೇಂದ್ರ ಸಚಿವ ಭಗವಂತ ಖೂಬಾಗೆ ಭವ್ಯ ಸ್ವಾಗತ

ತೆಲಂಗಾಣ–ಕರ್ನಾಟಕ ಗಡಿಯಲ್ಲಿ ಶಾಲು ಹೊದಿಸಿ ಹೂವಿನ ಮಾಲೆ ಹಾಕಿ ಅಭಿನಂದಿಸಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 14:59 IST
Last Updated 16 ಆಗಸ್ಟ್ 2021, 14:59 IST
ಬೀದರ್‌ನ ಬಸವೇಶ್ವರ ವೃತ್ತದ ಸಮೀಪ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಶರಣು ಸಲಗರ, ಶಿವಾನಂದ ಮಂಠಾಳಕರ್, ಈಶ್ವರಸಿಂಗ್‌ ಠಾಕೂರ್‌ ಇದ್ದಾರೆ
ಬೀದರ್‌ನ ಬಸವೇಶ್ವರ ವೃತ್ತದ ಸಮೀಪ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಶರಣು ಸಲಗರ, ಶಿವಾನಂದ ಮಂಠಾಳಕರ್, ಈಶ್ವರಸಿಂಗ್‌ ಠಾಕೂರ್‌ ಇದ್ದಾರೆ   

ಬೀದರ್‌: ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸೋಮವಾರ ಜಿಲ್ಲೆಗೆ ಆಗಮಿಸಿದ ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರಿಗೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಭವ್ಯ ಸ್ವಾಗತ ನೀಡಿದರು.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೀದರ್‌ಗೆ ಬಂದ ಅವರಿಗೆ ತೆಲಂಗಾಣ–ಕರ್ನಾಟಕ ಗಡಿಯಲ್ಲೇ ಅಭಿಮಾನಿಗಳು ಶಾಲು ಹೊದಿಸಿ ಹೂವಿನ ಮಾಲೆ ಹಾಕಿ, ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ನೇರವಾಗಿ ಸಿದ್ಧಾರೂಢ ಮಠಕ್ಕೆ ಬಂದ ಸಚಿವರು ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಸ್ವಾಮೀಜಿ ಶಾಲು ಹೊದಿಸಿ ಶುಭ ಕೋರಿದರು. ಅಲ್ಲಿಂದ ಹೊರಟ ಸಚಿವರು ಬಸವೇಶ್ವರ ವೃತ್ತಕ್ಕೆ ಬಂದು ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು.

ADVERTISEMENT

ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಸಚಿವ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಕುದುರೆ ಮೇಲೆ ಕುಳಿತು ಮೆರವಣಿಗೆಯಲ್ಲಿ ಭಗತ್‌ಸಿಂಗ್‌ ವೃತ್ತದ ವರೆಗೂ ಬಂದು ಭಗತ್‍ಸಿಂಗ್ ಪ್ರತಿಮೆ, ಡಾ.ಬಿ.ಆರ್.ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜ, ಶರಣ ಹರಳಯ್ಯ ಹಾಗೂ ಮಡಿವಾಳ ಮಾಚಿದೇವ ಪುತ್ಥಳಿಗಳಿಗೆ ಮಾರ್ಲಾರ್ಪಣೆ ಮಾಡಿದರು.

ಬಿಜೆಪಿ ಮುಖಂಡರಾದ ಡಿ.ಕೆ.ಸಿದ್ರಾಮ ಹಾಗೂ ಜಗದೀಶ ಖೂಬಾ ಬಸವೇಶ್ವರ ವೃತ್ತದಲ್ಲಿ ಕುದುರೆ ಸವಾರಿ ಮಾಡಿ ಗಮನ ಸೆಳೆದರು.

ತದನಂತರ ಭಗವಂತ ಖೂಬಾ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಗುಂಪಾ, ಬಸವೇಶ್ವರ ವೃತ್ತ, ಭಗತ್‌ಸಿಂಗ್‌ ವೃತ್ತ ಹಾಗೂ ಮಡಿವಾಳ ವೃತ್ತದಲ್ಲಿ ಕ್ರೇನ್‌ ಮೂಲಕ ಅವರಿಗೆ ಬೃಹತ್‌ ಮಾಲೆಗಳನ್ನು ಹಾಕಲಾಯಿತು. ಮಾರ್ಗದುದ್ದಕ್ಕೂ ಅಲ್ಲಲ್ಲಿ ಕಾರ್ಯಕರ್ತರು ಪುಷ್ಪವೃಷ್ಟಿ ಗೈದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಾದ್ಯವೃಂದದವರು ಮೆರವಣಿಗೆ ಮುಂಚೂಣಿಯಲ್ಲಿದ್ದರು.

ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪೂರೆ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಹಿರಿಯ ಮುಖಂಡರಾದ ಗುರುನಾಥ ಕೊಳ್ಳೂರ್, ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರ್‌ಸಿಂಗ್ ಠಾಕೂರ್, ಜಯಕುಮಾರ ಕಾಂಗೆ, ಸೋಮನಾಥ ಪಾಟೀಲ, ಅರಿಹಂತ ಸಾವಳೆ, ಹಣಮಂತ ಬುಳ್ಳಾ, ಗುರುನಾಥ ಜ್ಯಾಂತಿಕರ್, ರೇವಣಸಿದ್ದಪ್ಪ ಜಲಾದೆ ಹಾಗೂ ಲುಂಬಿಣಿ ಗೌತಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.