ADVERTISEMENT

ಐದು ವರ್ಷಗಳಲ್ಲಿ ಖೂಬಾ ಸಾಧನೆ ಏನು?: ಅಶೋಕ ಖೇಣಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 15:28 IST
Last Updated 30 ಏಪ್ರಿಲ್ 2019, 15:28 IST
ಬೀದರ್‌ ತಾಲ್ಲೂಕಿನ ಕಾಶೆಂಪೂರ(ಪಿ) ಗ್ರಾಮದಲ್ಲಿ ಮಾಜಿ ಶಾಸಕ ಅಶೋಕ ಖೇಣಿ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಪ್ರಚಾರ ಮಾಡಿದರು
ಬೀದರ್‌ ತಾಲ್ಲೂಕಿನ ಕಾಶೆಂಪೂರ(ಪಿ) ಗ್ರಾಮದಲ್ಲಿ ಮಾಜಿ ಶಾಸಕ ಅಶೋಕ ಖೇಣಿ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಪ್ರಚಾರ ಮಾಡಿದರು   

ಬೀದರ್‌: ‘ನಿರಂತರವಾಗಿ ನಡೆಯುವ ಕಾಮಗಾರಿಗಳನ್ನೇ ಉಲ್ಲೇಖಿಸುತ್ತಿರುವ ಬಿಜೆಪಿ ಸಂಸದ ಭಗವಂತ ಖೂಬಾ ಅವರು ಐದು ವರ್ಷಗಳಲ್ಲಿ ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ಅಶೋಕ ಖೇಣಿ ಆಗ್ರಹಿಸಿದರು.

‘ಖೂಬಾ ಸಾಧನೆ ಶೂನ್ಯ. ಉದ್ಯಾನ ಅಥವಾ ರಸ್ತೆ ಬದಿಗೆ ಬೆಂಚ್‌ ಹಾಕುವುದು ನಿಜವಾದ ಸಂಸದನ ಕೆಲಸ ಅಲ್ಲ. ಉದ್ಯೋಗ ಸೃಷ್ಟಿಗೆ ಹಾಗೂ ಕೈಗಾರಿಕೆಗಳನ್ನು ಆರಂಭಿಸಲು ಏನು ಪ್ರಯತ್ನ ಮಾಡಿದ್ದಾರೆ ಎನ್ನುವುದನ್ನು ಹೇಳಬೇಕು’ ಎಂದು ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು 1995ರಲ್ಲಿ. ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದ ಕಾಮಗಾರಿ ಇದೀಗ ಪೂರ್ಣಗೊಂಡಿದೆ. ರೈಲ್ವೆ ಯೋಜನೆಗಳು ಮಲ್ಲಿಕಾರ್ಜುನ ಖರ್ಗೆ ಅವಧಿಯಲ್ಲೇ ಆಗಿವೆ. ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ರೈಲು ಓಡಿಸುವುದು ಕಷ್ಟದ ಕೆಲಸವಲ್ಲ. ಆದರೆ, ಹಿಂದಿನವರ ಪರಿಶ್ರಮವನ್ನು ಖೂಬಾ ತಮ್ಮ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಮೋದಿ ಒಬ್ಬ ಅದೃಷ್ಟವಂತ ವ್ಯಕ್ತಿ. ಕಾರಣ ದೇಶದ ಅಭಿವೃದ್ಧಿಗೆ ಜವಾಹರಲಾಲ ನೆಹರೂ ಹಾಗೂ ಇಂದಿರಾ ಗಾಂಧಿ ಪರಿಶ್ರಮ ಪಟ್ಟಿದ್ದಾರೆ. ಆದರೆ, ಮೋದಿ ಅನಾಯಾಸವಾಗಿ ಅಧಿಕಾರ ಹಿಡಿದಿದ್ದಾರೆ’ಎಂದು ಹೇಳಿದರು.

ಬಿರುಸಿನ ಪ್ರಚಾರ: ‘ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು 50 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ತಂತ್ರ ರೂಪಿಸಲಾಗಿದೆ. ಚುನಾವಣಾ ಪ್ರಚಾರದ ಭಾಗವಾಗಿ ಏಪ್ರಿಲ್‌ 16ರಂದು ಒಂದೇ ದಿನ ಕ್ಷೇತ್ರದ ಎಂಟು ಗ್ರಾಮಗಳಲ್ಲಿ ವಿಶೇಷ ಪ್ರಚಾರ ಸಭೆಗಳನ್ನು ಆಯೋಜಿಸಲಾಗಿದೆ’ ಎಂದು ಖೇಣಿ ತಿಳಿಸಿದರು.

ಬೀದರ್‌ ತಾಲ್ಲೂಕಿನ ಕಮಠಾಣಾ, ಬಗದಲ್, ಔರಾದ್‌ ಸಿರ್ಸಿ, ಚಿಟ್ಟಾ, ಮನ್ನಳ್ಳಿ, ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ, ನಿರ್ಣಾ, ಬೇಮಳಖೇಡಾ ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಲಾಗುವುದು. ಪ್ರತಿಯೊಂದು ಗ್ರಾಮದಲ್ಲಿ ಕನಿಷ್ಠ ಒಂದು ತಾಸು ಕಾರ್ಯಕ್ರಮ ನಡೆಯಲಿದೆ. ಅಭ್ಯರ್ಥಿ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಮಾರ್ಚ್‌ 31 ರಿಂದ ಈವರೆಗೆ ಒಟ್ಟು 23 ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಮಾಡಲಾಗಿದೆ. ಘೋಡಂಪಳ್ಳಿ, ಬಾವಗಿ, ಕಮಠಾಣಾ, ಆಣದೂರ, ಸಿಕೇನಪುರ, ಹೊನ್ನಡ್ಡಿ, ಶೇಖಾಪುರ, ತಡಪಳ್ಳಿ, ಕರಕನಳ್ಳಿ, ಚಾಂಗಲೇರಾ, ಕಾರಪಾಕಪಳ್ಳಿ, ಭಂಗೂರ, ರಂಜೋಳ ಖೇಣಿ, ಕಾಶೆಂಪುರ, ಬುಧೇರಾ, ಯಾಕತಪುರ, ಕೊಳಾರ(ಬಿ), ಮರಕುಂದಾ, ಮಂಗಲಗಿ, ಮಂಗಲಗಿ, ನಾಗನಕೇರಾ, ಶ್ರೀಕಟನಳ್ಳಿ ಗ್ರಾಮಗಳಲ್ಲಿ ಸಂಚರಿಸಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ 24 ಗಂಟೆಗಳಲ್ಲಿ ಕೊಳವೆಬಾವಿ ಕೊರೆಸುತ್ತಿದ್ದೆ. ನಾನು ಶಾಸಕನಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕ್ಷೇತ್ರದ ಜನ ಈಗಲೂ ಸ್ಮರಿಸುತ್ತಿದ್ದಾರೆ. ಹೀಗಾಗಿ ಈಶ್ವರ ಖಂಡ್ರೆ ಗೆದ್ದರೆ ನಾನೇ ಗೆದ್ದಂತೆ ಎಂದು ಜನರಿಗೆ ಮನವರಿಕೆ ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ಕೆಪಿಸಿಸಿ ಕಾರ್ಯದರ್ಶಿ ಪಾತಪ್ಪ, ಮೀನಾಕ್ಷಿ ಸಂಗ್ರಾಮ, ಚಂದ್ರಶೇಖರ ಚನಶೆಟ್ಟಿ, ರುಕ್ಮಾರೆಡ್ಡಿ ಪಾಟೀಲ, ಅಬ್ದುಲ್‌ ಸತ್ತಾರ, ಕರೀಂಸಾಬ ಕಮಠಾಣಾ, ಚಂದ್ರಶೇಖರ ಮಡಕಿ, ಗೋವರ್ಧನ ರಾಠೋಡ, ಚಂದು ಮಡಕಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.