ADVERTISEMENT

ದೇಶದ ಅಭಿವೃದ್ಧಿಗೆ ಲಿಂಗ ಸಮಾನತೆ ಅಗತ್ಯ: ನ್ಯಾಯಾಧೀಶೆ ಸರಸ್ವತಿ ದೇವಿ

ಕಾರ್ಯಾಗಾರದಲ್ಲಿ ನ್ಯಾಯಾಧೀಶೆ ಸರಸ್ವತಿ ದೇವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 13:13 IST
Last Updated 22 ಡಿಸೆಂಬರ್ 2021, 13:13 IST
ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ಹೋಮಿಯೋಪಥಿಕ್ ಮಹಾವಿದ್ಯಾಲಯದ ನಡೆದ ಕಾರ್ಯಾಗಾರವನ್ನು ನ್ಯಾಯಾಧೀಶೆ ಸರಸ್ವತಿ ದೇವಿ ಉದ್ಘಾಟಿಸಿದರು
ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ಹೋಮಿಯೋಪಥಿಕ್ ಮಹಾವಿದ್ಯಾಲಯದ ನಡೆದ ಕಾರ್ಯಾಗಾರವನ್ನು ನ್ಯಾಯಾಧೀಶೆ ಸರಸ್ವತಿ ದೇವಿ ಉದ್ಘಾಟಿಸಿದರು   

ಹುಮನಾಬಾದ್: ‘ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಹೆಣ್ಣಿಗೆ ವಿಶೇಷ ಗೌರವ ನೀಡಲಾಗುತ್ತಿದೆ. ಇದು ನಮ್ಮ ಸಂಸ್ಕೃತಿ. ಲಿಂಗ ಸಮಾನತೆಯಿಂದ ದೇಶದ ಅಭಿವೃದ್ಧಿ ಸಾಧ್ಯ’ ಎಂದು ಜೆಎಂಎಫ್‍ಎಸ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶೆ ಸರಸ್ವತಿ ದೇವಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಆಸ್ಪತ್ರೆ ಹಾಗೂ ತಾಲ್ಲೂಕು ಕಾನೂನು ಸಮಿತಿ ಸಹಯೋಗದಲ್ಲಿ ಪಟ್ಟಣದ ವೀರಭದ್ರೇಶ್ವರ ಹೋಮಿಯೋಪಥಿಕ್‌ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ನಡೆದ ‘ಗರ್ಭಪೂರ್ವ, ಪ್ರಸವ ಪೂರ್ವ ಲಿಂಗ ಆಯ್ಕೆ ನಿಷೇಧ ಕಾಯ್ದೆ -1994’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷರು ಮತ್ತು ಸ್ತ್ರೀಯರು ಸಮಾಜದಲ್ಲಿ ಸಮಾನರಾಗಿ ಜೀವನ ಸಾಗಿಸಬೇಕು. ಹೆಣ್ಣು ಭ್ರೂಣ ಹತ್ಯೆಗೆ ನೆರವಾಗುವ ವೈದ್ಯರು, ಸಂಬಂಧಿಕರಿಗೆ 5 ವರ್ಷ ಜೈಲು, ಮತ್ತು ₹50 ಸಾವಿರ ದಂಡ ವಿಧಿಸಲಾಗುತ್ತದೆ ಎಂದರು.

ADVERTISEMENT

ತಹಶೀಲ್ದಾರ್ ನಾಗಯ್ಯಾ ಹಿರೇಮಠ ಮಾತನಾಡಿ,‘ಕಾಯ್ದೆ ಅನ್ವಯ ಸ್ಕ್ಯಾನಿಂಗ್ ನಡೆಸಲು ಎಲ್ಲ ಕೇಂದ್ರಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು. ಕೇಂದ್ರಗಳು ಯಾವ ರೂಪದಲ್ಲೂ ಜಾಹೀರಾತು ನೀಡತಕ್ಕದ್ದಲ್ಲ’ ಎಂದರು.

ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ ಹುಲಸೂರೆ ಮಾತನಾಡಿ,‘ವೈದ್ಯರು, ಸಿಬ್ಬಂದಿಗೆ ಕಾನೂನು ಅರಿವು ಅಗತ್ಯ. ಪಿಸಿಪಿಎನ್‍ಡಿಟಿ ಉತ್ತಮ ಕಾಯ್ದೆಯಾಗಿದೆ. ರಾಜ್ಯ, ಜಿಲ್ಲಾ ಮಟ್ಟದ ಸಲಹಾ ಸಮಿತಿಗಳ ಸೂಚನೆಯನ್ನು ಎಲ್ಲ ಕೇಂದ್ರಗಳೂ ಪಾಲಿಸಬೇಕು. ಹೆಣ್ಣು ಭ್ರೂಣ ಹತ್ಯೆ ಮಾಡುವುದು ತಪ್ಪು ಎಂದು ಗೊತ್ತಿದ್ದರೂ, ಹೆಣ್ಣು ಹೆತ್ತರೆ ಮನೆಗೆ ಅನಿಷ್ಟ , ವರದಕ್ಷಿಣೆ ನೀಡಬೇಕು ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು’ ಎಂದರು.

ಸ್ಕ್ಯಾನಿಂಗ್ ತಜ್ಞ ಡಾ.ಶರಣಪ್ಪ ಹಳಿದೊಡ್ಡಿ, ಡಾ.ಮುಜಾಫರ್ ಹುಸೇನ್, ಡಾ.ಇಂದ್ರಜಿತ್ ಷಾ, ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ ಹುಡಗಿ, ಐಸಿಟಿಸಿ ಕೌನ್ಸೆಲರ್ ಗೀತಾರೆಡ್ಡಿ , ಸಂಜಯ ಗುತ್ತೇದಾರ ಬಾರ್ ಕೌನ್ಸಿಲ್ ಕಾರ್ಯದರ್ಶಿ ಹರೀಶ ಅಗಡಿ, ಡಾ.ಅಶ್ಫಿಯಾ, ಡಾ.ಸ್ವರ್ಣಶ್ರೀ, ಡಾ. ಶ್ರೀಕಾಂತ, ಶಿವಕುಮಾರ ಕಿವಡೆ, ಸುಕೇಶಿನಿ, ವಿನೋಲಿಯಾ, ಶಿವಕುಮಾರ ಕಂಪ್ಲಿ ಹಾಗೂ ಭಗವಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.