ADVERTISEMENT

ಮೆಣಸಿನಕಾಯಿ ಸ್ವಲ್ಪ ಖಾರ

ಚಂದ್ರಕಾಂತ ಮಸಾನಿ
Published 6 ಫೆಬ್ರುವರಿ 2020, 15:39 IST
Last Updated 6 ಫೆಬ್ರುವರಿ 2020, 15:39 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್: ತರಕಾರಿ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದ ಈರುಳ್ಳಿ ಬೆಲೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಒಂದು ವಾರದ ಅವಧಿಯಲ್ಲೇ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಬದನೆಕಾಯಿ ಬೆಲೆ ಹೆಚ್ಚಳದ ಕಿರೀಟ ಧರಿಸಿದೆ. ಮೆಣಸಿನಕಾಯಿ ಬೆಲೆ ಸ್ವಲ್ಪ ಹೆಚ್ಚಾಗಿದೆ.

ಬೇರೆ ಬೇರೆ ಕಡೆಯಿಂದಲೂ ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವ ಕಾರಣ ಸ್ವಲ್ಪ ಬೆಲೆ ಕಡಿಮೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಈರುಳ್ಳಿ ಬೆಲೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ. ಸದ್ಯ ಗ್ರಾಹಕರು ಒಂದು ವಾರಕ್ಕೆ ಎಷ್ಟು ಅಗತ್ಯವೋ ಅಷ್ಟೇ ಪ್ರಮಾಣದ ಈರುಳ್ಳಿ ಖರೀದಿಸುತ್ತಿದ್ದಾರೆ.

ಬೆಳಗಾವಿಯಿಂದ ಬೀದರ್‌ಗೆ ಬರುವ ಮೆಣಸಿನಕಾಯಿ ಪ್ರಮಾಣ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಳವಾಗಿದೆ. ಬದನೆಕಾಯಿ ಹಾಗೂ ಮೆಂತೆಸೊಪ್ಪಿನ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಏರಿಕೆಯಾಗಿದೆ.

ADVERTISEMENT

ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 15 ಸಾವಿರದಿಂದ ₹ 12 ಸಾವಿರಕ್ಕೆ ಕುಸಿದಿದೆ. ಆದರೂ ನುಗ್ಗೆಕಾಯಿ ಕೊಳ್ಳಲು ಜನ ಸಾಮಾನ್ಯರು ಹಿಂದೇಟು ಹಾಕುತ್ತಿದ್ದಾರೆ. ಮನೆಯಲ್ಲಿ ಕಾರ್ಯಕ್ರಮ ಇರುವವರು ಮಾತ್ರ ಅಗತ್ಯವಿರುವಷ್ಟು ನುಗ್ಗೆಕಾಯಿ ಖರೀದಿಸುತ್ತಿದ್ದಾರೆ.

ಆಲೂಗಡ್ಡೆ, ತೊಂಡೆಕಾಯಿ, ಬೆಂಡೆಕಾಯಿ, ಬೆಳ್ಳುಳ್ಳಿ, ಗಜ್ಜರಿ, ಹೂಕೋಸು, ಸಬ್ಬಸಗಿ, ಬೀಟ್‌ರೂಟ್, ಕೊತಂಬರಿ, ಟೊಮೆಟೊ ಹಾಗೂ ಪಾಲಕ್‌ ಬೆಲೆ ಸ್ಥಿರವಾಗಿದೆ.

ಹೈದರಾಬಾದ್‌ನಿಂದ ತೊಂಡೆಕಾಯಿ, ಬೆಂಡೆಕಾಯಿ, ಬೀಟ್‌ರೂಟ್, ಟೊಮೆಟೊ ಹಾಗೂ ಪಾಲಕ್‌ ಬಂದಿದೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.