ADVERTISEMENT

ಮರಾಠ ಸಮಾಜ 2ಎಗೆ ಸೇರಿಸಲು ಶ್ರಮಿಸುವೆ: ಸಂಸದ ಸಾಗರ್‌ ಖಂಡ್ರೆ

ಸಕಲ ಮರಾಠಾ ಸಮಾಜದಿಂದ ಸಂಸದ ಸಾಗರ್‌ ಖಂಡ್ರೆ, ಎಂಎಲ್‌ಸಿ ಮುಳೆ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 15:18 IST
Last Updated 2 ಮಾರ್ಚ್ 2025, 15:18 IST
   

ಬೀದರ್‌: ‘ಮರಾಠ ಸಮಾಜವನ್ನು ಪ್ರವರ್ಗ 2ಎನಲ್ಲಿ ಸೇರಿಸುವ ಅಗತ್ಯವಿದ್ದು, ಈ ಕುರಿತು ಲೋಕಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಸಂಸದ ಸಾಗರ್‌ ಖಂಡ್ರೆ ಆಶ್ವಾಸನೆ ನೀಡಿದರು.

ಸಕಲ ಮರಾಠ ಸಮಾಜದಿಂದ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೀದರ್‌ ನಗರದಲ್ಲಿ ಮರಾಠ ಸಮುದಾಯ ಭವನಕ್ಕೆ 2 ಎಕರೆ ಜಮೀನು ನೀಡಬೇಕೆಂಬ ಬೇಡಿಕೆಯಿದ್ದು, ಈಡೇರಿಸುವೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ತಾಲ್ಲೂಕಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ–ಸಾಧನೆಗಳನ್ನು ಬಿಂಬಿಸುವ ಶಿವಸೃಷ್ಟಿ ಪಾರ್ಕ್‌ ಕೂಡ ನಿರ್ಮಿಸಲು ಯತ್ನಿಸುವೆ ಎಂದು ಹೇಳಿದರು.

ADVERTISEMENT

ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಬೀದರ್‌ ಜಿಲ್ಲೆಗೆ ನೀಡಬೇಕೆಂದು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸುತ್ತೇನೆ. ಮರಾಠ ಸಮುದಾಯ ಭವನ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕೂಡಲೇ ಈ ಭವನಕ್ಕೆ ಸಂಸದರ ಅನುದಾನದಲ್ಲಿ ₹25 ಲಕ್ಷ ನೀಡಿ ಕಾಮಗಾರಿ ಬೇಗ ಪೂರ್ಣಗೊಳಿಸಲು ಸೂಚಿಸುವೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಎಂ.ಜಿ. ಮುಳೆ, ಮರಾಠ ಸಮಾಜವನ್ನು 2ಎಗೆ ಸೇರಿಸಬೇಕೆನ್ನುವುದು ಬಹುವರ್ಷಗಳ ಬೇಡಿಕೆಯಾಗಿದೆ. ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ತುಂಬಬೇಕು. ಮರಾಠ ಸಮುದಾಯದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದರೆ ನಿಗಮದ ವತಿಯಿಂದ ₹50 ಲಕ್ಷ ಅನುದಾನವಿದೆ. ಬೀದರ್‌ ಜಿಲ್ಲೆಯ ಒಬ್ಬ ವಿದ್ಯಾರ್ಥಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ಕೊಡಬೇಕು. ವಿದ್ಯಾರ್ಥಿಗಳು ಈ ಯೋಜನೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮರಾಠ ಅಭಿವೃದ್ಧಿ ನಿಗಮದಿಂದ ಅನೇಕ ಸೌಲಭ್ಯಗಳನ್ನು ಸಮಾಜದ ಜನರಿಗೆ ಸರ್ಕಾರ ನೀಡುತ್ತಿದೆ. ಸಮಾಜದ ಜನರು ಇದರ ಬಗ್ಗೆ ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು. ಅರ್ಥವಾಗದಿದ್ದರೆ ನಾನು ಜನರಿಗೆ ಮಾರ್ಗದರ್ಶನ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.

ಬೆಂಗಳೂರಿನ ವೇದಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ಮರಾಠ ಸಮಾಜದ ಇನ್ನೊಂದು ಹೆಸರು ಕ್ಷತ್ರೀಯ ಸಮಾಜ. ಇದು ಎಲ್ಲರನ್ನೂ ಇಂಬಿಟ್ಟುಕೊಂಡು ಸಮಾನತೆಯಿಂದ ಸಾಗುವ ಸಮಾಜವಾಗಿದೆ. ಎಲ್ಲರೂ ಐಕ್ಯತೆಯಿಂದ ಬದುಕಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.

ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಸದಾ ಜಾಗೃತರಾಗಿ ಸಮಾಜದ ಸೇವೆಯ ಜೊತೆಗೆ ಸ್ವಯಂ ಏಳಿಗೆಗೆ ಸಮಯ ನೀಡಬೇಕು. ಕಾರವಾರ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿ ಶ್ರೀಹರಿ ಛತ್ರಪತಿ ಶಿವಾಜಿ ಮಹಾರಾಜ ಗುರುಕುಲ ಸ್ಥಾಪಿಸಲಾಗುತ್ತಿದೆ. ಅಲ್ಲಿ ಸಮಾಜದ ಮಕ್ಕಳಿಗೆ ಶಿಕ್ಷಣ, ಸಂಗೀತ, ವೇದಾಂತ, ಸಂಸ್ಕೃತ, ಸಂಸ್ಕಾರ, ಭಾಷಾ ಜ್ಞಾನ ಕಲಿಸಿಕೊಡಲಾಗುತ್ತಿದೆ ಎಂದರು.

ಅಭಿನಂದನಾ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕಕುಮಾರ ಕಣಜಿಕರ್, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷ ದಿಗಂಬರರಾವ್‌ ಮಾನಕಾರಿ, ಸ್ವಾಗತ ಮತ್ತು ಸತ್ಕಾರ ಸಮಿತಿ ಕಾರ್ಯದರ್ಶಿ ವೆಂಕಟರಾವ್‌ ಮಾಯಿಂದೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುರಾವ ಮಾನಕಾರಿ, ಸಕಲ ಮರಾಠ ಸಮಾಜದ ಮುಖಂಡರಾದ ಜನಾರ್ದನ ಬಿರಾದಾರ, ಪಂಚಶೀಲ ಪಾಟೀಲ, ಜನಾರ್ದನ ವಾಘಮಾರೆ, ಸಂಯೋಜಕ ಪ್ರದೀಪ ಬಿರಾದಾರ, ಪ್ರಕಾಶ ಪಾಟೀಲ, ಕಿರಣ ಬಿರಾದಾರ, ತಾತ್ಯಾರಾವ ಪಾಟೀಲ ಬಸವಕಲ್ಯಾಣ, ರಘುನಾಥರಾವ ಜಾಧವ್, ಪಾಂಡುರಂಗ ಕಣಜಿ, ಮೀನಾಕ್ಷಿ ಕಾಳೆ, ಹಣಮಂತರಾವ ಚವಾಣ್‌, ಸತೀಶ ಪಾಟೀಲ, ಕಿಶನರಾವ್‌ ಪಾಟೀಲ, ಬನ್ಸಿಲಾಲ್ ಬೊರಾಳೆ, ನಾರಾಯಣ ಪಾಟೀಲ, ವಿದ್ಯಾವಾನ್ ಪಾಟೀಲ, ಶಾಹುರಾಜ್ ಪವಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.