ADVERTISEMENT

ಬಸವಕಲ್ಯಾಣದ ಪ್ರಥಮ ಚುನಾವಣೆಯಲ್ಲಿ ಮಹಿಳೆಗೆ ಒಲಿದಿತ್ತು ಅದೃಷ್ಟ

ಬಸವಕಲ್ಯಾಣ- ಹುಲಸೂರ ತಾಲ್ಲೂಕು ಒಳಗೊಂಡ ವಿಧಾನಸಭಾ ಕ್ಷೇತ್ರ

ಮಾಣಿಕ ಆರ್ ಭುರೆ
Published 22 ಮಾರ್ಚ್ 2021, 3:27 IST
Last Updated 22 ಮಾರ್ಚ್ 2021, 3:27 IST
ಅನ್ನಪೂರ್ಣಾ ಬಾಯಿ ರಗಟೆ
ಅನ್ನಪೂರ್ಣಾ ಬಾಯಿ ರಗಟೆ   

ಬಸವಕಲ್ಯಾಣ: ಬಸವಕಲ್ಯಾಣ- ಹುಲಸೂರ ತಾಲ್ಲೂಕುಗಳನ್ನು ಒಳಗೊಂಡಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ 15ನೇ ಚುನಾವಣೆಗೆ ಸಜ್ಜಾಗಿದೆ. ಶಾಸಕ ಬಿ.ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ತೆರವಾದ ಈ ಕ್ಷೇತ್ರ ಪ್ರಥಮ ಸಲ ಉಪ ಚುನಾವಣೆ ಎದುರಿಸುತ್ತಿದೆ.

ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಘೋಷಣೆ ಆಗಿದೆ. ಬಿಜೆಪಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಎರಡು ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಈ ಬಗ್ಗೆ ಬೆಂಗಳೂರು ಮಟ್ಟದಲ್ಲಿ ರಾಜಕೀಯ ಚಟುವಟಿಕೆ ಬಿರುಸಿನಿಂದ ಸಾಗಿದೆ.

ಹುಮನಾಬಾದ್ ಕ್ಷೇತ್ರದಿಂದ ಬೇರ್ಪಟ್ಟ ಈ ವಿಧಾನಸಭಾ ಕ್ಷೇತ್ರದಲ್ಲಿ 1957ರಲ್ಲಿ ಪ್ರಥಮ ಬಾರಿ ಶಾಸಕರ ಆಯ್ಕೆ ನಡೆಯಿತು. ಆಗ ಇಲ್ಲಿ ಬರೀ 50 ಸಾವಿರ ಮತದಾರರಿದ್ದರು. ಈಗ ಈ ಸಂಖ್ಯೆ 2.38 ಲಕ್ಷ ತಲುಪಿದೆ. ಮೊದಲ ಚುನಾವಣೆಯಲ್ಲಿಯೇ ಮಹಿಳೆಗೆ ಆದ್ಯತೆ ನೀಡಲಾಯಿತು. ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಇಲ್ಲಿ ಮದುವೆ ಮಾಡಿಕೊಟ್ಟಿದ್ದ ಅನ್ನಪೂರ್ಣಬಾಯಿ ಅವರು ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿ, ಇತರೆ ಮುಖಂಡರಿಗೆ ಟಿಕೆಟ್ ಕೇಳಲು ಪಕ್ಷದ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದರು. ಆದರೆ, ಪಕ್ಷದವರು ಇವರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದರು. ಇವರು 1957 ಹಾಗೂ 1962ರಲ್ಲಿ ಅವರು ಶಾಸಕರಾಗಿ ಆಯ್ಕೆಯಾದರು.

ADVERTISEMENT

ನಂತರದಲ್ಲಿ ಅಡತ್ ವ್ಯಾಪಾರಿ ಹಾಗೂ ಲಾರಿ ಮಾಲೀಕರಾಗಿದ್ದ ಸಿದ್ರಾಮಪ್ಪ ಖೂಬಾ 1967ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಗೊಂಡರು. ಎರಡನೇ ಚುನಾವಣೆಯಲ್ಲಿ ಸೋತರು. ನಂತರ ಬಾಪುರಾವ್ ಪಾಟೀಲ ಹುಲಸೂರಕರ್ 1972 ಹಾಗೂ 1978 ರಲ್ಲಿ ಶಾಸಕರಾದರು. ಕಾನೂನು ಮತ್ತು ಪೌರಾಡಳಿತ ಸಚಿವರಾಗಿದ್ದ ಇವರು ವಿಧಾನಸಭೆ ಉಪ ಸಭಾಪತಿಯೂ ಆಗಿದ್ದರು.

4 ಸಲ ಕಾಂಗ್ರೆಸ್, 1 ಸಲ ಪಕ್ಷೇತರರು ಗೆದಿದ್ದ ಈ ಕ್ಷೇತ್ರ 1983ರಲ್ಲಿ
ಜನತಾ ಪಕ್ಷದ ಪಾಲಾಯಿತು. ಯುವಕರಾಗಿದ್ದ ಹಾಗೂ ಈ ಕ್ಷೇತ್ರದಲ್ಲಿ 5 ಸಲ ಶಾಸಕರಾದ ಹೆಗ್ಗಳಿಕೆ ಇರುವ ಬಸವರಾಜ ಪಾಟೀಲ ಅಟ್ಟೂರ್ ಆಯ್ಕೆಗೊಂಡರು. 1985, 1989, 1994 ರ ಚುನಾವಣೆಗಳಲ್ಲಿ ಇವರು ಶಾಸಕರಾಗಿ ಆಯ್ಕೆಗೊಂಡು ಸಣ್ಣ ನೀರಾವರಿ, ಉನ್ನತ ಶಿಕ್ಷಣ, ಸಣ್ಣ ಕೈಗಾರಿಕೆ ಸಚಿವರಾದರು.

ಮೂರು ಸಲ ಅಟ್ಟೂರ್ ಅವರ ಎದುರಾಳಿ ಆಗಿದ್ದ ಎಂ.ಜಿ.ಮುಳೆ ಅವರಿಗೆ ನಾಲ್ಕನೇ ಸಲ 1999ರಲ್ಲಿ ಅದೃಷ್ಟ ಒಲಿಯಿತು. ಅವರು
ಕಾಂಗ್ರೆಸ್ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಮುಂದೆ ಮತ್ತೆ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ 2004 ರಲ್ಲಿ ರಾಜಕೀಯಕ್ಕೆ ಹೊಸಬರಾಗಿದ್ದ ಮಲ್ಲಿಕಾರ್ಜುನ ಖೂಬಾ ಜೆಡಿಎಸ್‌ನಿಂದ ಸ್ಪರ್ಧಿಸಿ ಅಟ್ಟೂರ್ ಹಾಗೂ ಮುಳೆ ಇಬ್ಬರನ್ನೂ ಸೋಲಿಸಿ ವಿಜೇತರಾದರು.

ಏಳನೇ ಸಲ 2008ರಲ್ಲಿ ಮತ್ತೆ ಬಸವರಾಜ ಪಾಟೀಲ ಅಟ್ಟೂರ್ ಬಿಜೆಪಿಯಿಂದ ಆಯ್ಕೆಗೊಂಡರು. 2013ರಲ್ಲಿ ಮಲ್ಲಿಕಾರ್ಜುನ ಖೂಬಾ ಎರಡನೇ ಸಲ ಶಾಸಕರಾದರು.

ಇದುವರೆಗೆ ಬರೀ ಲಿಂಗಾಯತ- ಮರಾಠಾ ಸಮುದಾಯವರು ಶಾಸಕರಾಗುತ್ತಿದ್ದ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗವಾದ ಕೋಲಿ ಸಮುದಾಯದ ಬಿ.ನಾರಾಯಣರಾವ್ 2018ರಲ್ಲಿ ಆಯ್ಕೆಗೊಂಡರು. ಅವರು 35 ವರ್ಷಗಳ ನಂತರ ಕಾಂಗ್ರೆಸ್‌ಗೆ ಮತ್ತೆ ಮರುಜೀವ ನೀಡಿದರು. ಆದರೆ, 30 ತಿಂಗಳಲ್ಲಿಯೇ ಇವರು ಅಕಾಲ ನಿಧನ ಹೊಂದಿದರು. ಅವರ ಮರಣದ ಐದು ತಿಂಗಳ ನಂತರ ಚುನಾವಣೆ ಘೋಷಣೆಯಾಗಿದ್ದು, ಏಪ್ರಿಲ್ 17ಕ್ಕೆ ಮತದಾನವಾಗಿ ಮೇ 2ಕ್ಕೆ ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.