ಔರಾದ್: ಎರಡು ವರ್ಷದ ಹಿಂದೆ ಮಳೆಯಿಂದ ಮನೆ ಗೋಡೆ ಕುಸಿದು ಸಂತ್ರಸ್ತರಾದ ಬೋರಾಳ ಗ್ರಾಮದ ಮಹಿಳೆ ಕವಿತಾ ಧನರಾಜ ಮೇತ್ರೆ ಅವರಿಗೆ ಸರ್ಕಾರದಿಂದ ಇವರೆಗೂ ಆಶ್ರಯ ಮನೆ ಕಲ್ಪಿಸಲು ಆಗಿಲ್ಲ.
ನಾಲ್ಕು ಕಡೆ ಮಣ್ಣಿನ ಗೋಡೆ ಹಾಗೂ ಮೇಲೆ ತಗಡಿನ ಶೀಟ್‌ನಲ್ಲಿ ನಾಲ್ಕು ಮಕ್ಕಳೊಂದಿಗೆ ವಾಸವಿರುವ ಕವಿತಾ ಮೇತ್ರೆ ಅವರ ಮನೆಯ ಮತ್ತೊಂದು ಗೋಡೆ ಮೊನ್ನೆ ಸುರಿದ ಮಳೆಗೆ ಕುಸಿದು ಬಿದ್ದಿದೆ.
2022ರಲ್ಲಿ ಇದೇ ರೀತಿ ಮಳೆಯಾಗಿ ಮನೆಯ ಒಂದು ಗೋಡೆ ಕುಸಿದಿತ್ತು. ಎರಡು ಭಾಗದಲ್ಲಿ ಮನೆಗೆ ಗೋಡೆ ಇಲ್ಲದೆ ಈ ಕುಟುಂಬ ಮಳೆ, ಚಳಿಯಲ್ಲಿ ಜೀವನ ಸಾಗಿಸುತ್ತಿದೆ.
‘ಮನೆ ಗೋಡೆ ಬಿದ್ದು ಮೂರು ದಿನಗಳಾಯಿತು. ಇರುವ ಅಲ್ಪಸ್ವಲ್ಪ ಧಾನ್ಯ, ಬಟ್ಟೆ ಬರೆಗಳು ನೀರು ಬಿದ್ದು ಹಾಳಾಗಿದೆ. ಬಿದ್ದಿರುವ ಗೋಡೆ ಜಾಗದಲ್ಲಿ ಮಳೆ, ಗಾಳಿಯಿಂದ ರಕ್ಷಿಸಲು ಚೀಲ ಕಟ್ಟಿದ್ದೇನೆ. ರಾತ್ರಿ ವೇಳೆ ಮಕ್ಕಳು ಚಳಿಗೆ ನಡುಗುತ್ತ ಮಲಗುವುದು ನನ್ನಿಂದ ನೋಡಲು ಆಗುತ್ತಿಲ್ಲ’ ಎಂದು ಸಂತ್ರಸ್ತ ಮಹಿಳೆ ಕವಿತಾ ಮೇತ್ರೆ ಗೋಳು ತೋಡಿಕೊಂಡಿದ್ದಾರೆ.
‘2022ರಲ್ಲಿ ಮನೆ ಗೋಡೆ ಬಿದ್ದಾಗ ಪತ್ರಿಕೆ ವರದಿ ನೋಡಿ ಜಿಲ್ಲಾಧಿಕಾರಿ ಅವರು ನನಗೆ ಮನೆ ಮಂಜೂರು ಮಾಡಿಕೊಡಲು ಗ್ರಾಮ ಪಂಚಾಯಿತಿಗೆ ಆದೇಶ ಮಾಡಿದ್ದರು. ಆದರೂ ಇಲ್ಲಿಯ ತನಕ ನನಗೆ ಮನೆ ಸಿಕ್ಕಿಲ್ಲ’ ಎಂದು ಅವರು ಬೇಸರಿಸಿದರು.
‘ಈ ಮಹಿಳೆಗೆ 2022ರಲ್ಲಿ ಗ್ರಾಮ ಸಭೆಯಲ್ಲಿ ಅಂಬೇಡ್ಕರ್ ಯೋಜನೆಯಲ್ಲಿ ಮನೆ ಮಂಜೂರು ಮಾಡಲಾಗಿತ್ತು. ಆದರೆ, ಇಂದಿಗೂ ಮನೆ ಕಟ್ಟಿಕೊಟ್ಟಿಲ್ಲ’ ಎಂದು ಬೋರಾಳ ಗ್ರಾಮದ ನಿವಾಸಿ, ದಲಿತ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಉಮಾಕಾಂತ ಸೋನೆ ಹೇಳುತ್ತಾರೆ.
ಮತ್ತೆ ಮಂಜೂರು... : ‘ಬೋರಾಳ ಗ್ರಾಮದ ಮಹಿಳೆಗೆ 2022ರಲ್ಲೇ ಅಂಬೇಡ್ಕರ್ ಯೋಜನೆಯಲ್ಲಿ ಮನೆ ಮಂಜೂರಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಅನುಮೋದನೆ ಸಿಕ್ಕಿಲ್ಲ. ಈಗ ಮತ್ತೆ ಅವರಿಗೆ 2023ರಲ್ಲಿ ಮನೆ ಮಂಜೂರಾಗಿದೆ’ ಎಂದು ಎಕಲಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.