ಬೀದರ್: ‘ಮಹಿಳೆಯರು ಅಬಲೆಯರಲ್ಲ ಸಬಲೆಯರು. ಎಲ್ಲಾ ರಂಗಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ್ ತಿಳಿಸಿದರು.
ಇಲ್ಲಿನ ನೌಬಾದ್‌ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಅನೇಕ ಸಂವಿಧಾನಾತ್ಮಕ ಸೌಲಭ್ಯಗಳಿವೆ. ಅವುಗಳ ಸದುಪಯೋಗ ಪಡೆದು ಮುಂದೆ ಬರಬೇಕೆಂದು ತಿಳಿಸಿದರು.
ಕಲಬುರಗಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಸವಿತಾ ತಿವಾರಿ ಮಾತನಾಡಿ, ಇಂದಿನ ಹೆಣ್ಣು ಮಕ್ಕಳ ಮೇಲೆ ಗುರುತರ ಜವಾಬ್ದಾರಿ ಇದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಸ್ತ್ರೀಯರಿಗೆ ಅಷ್ಟೊಂದು ಅವಕಾಶಗಳು ಇರಲಿಲ್ಲ. ನಿಮ್ಮ ಮುಂದೆ ಅನೇಕ ಮಹಿಳಾ ಸಾಧಕಿಯರ ದೊಡ್ಡ ಪಟ್ಟಿಯೇ ಇದೆ. ಜೀವನದಲ್ಲಿ ಅನೇಕ ಕಷ್ಟ ನಷ್ಟಗಳು ಎದುರಾಗುತ್ತವೆ. ಆದರೆ, ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಗುರಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಶ್ರೀ ಪ್ರಭಾ ಮಾತನಾಡಿ, ಮಹಿಳೆಯರು ಕೌಟುಂಬಿಕ ಜವಾಬ್ದಾರಿಯೊಂದಿಗೆ ಸಾಮಾಜಿಕ ರಂಗಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ ಎಂದರು.
ಹೆಣ್ಣು ಬರೀ ಅಲಂಕಾರಿಕ, ಭೋಗದ ವಸ್ತುವಲ್ಲ. ಅವಳಿಗೂ ಪುರುಷರ ಸರಿಸಮ ನಿಲ್ಲುವ ಎಲ್ಲ ಶಕ್ತಿ, ಸಾಮರ್ಥ್ಯಗಳಿವೆ. ಸಾಧನೆಗೆ ಕೊನೆ ಇಲ್ಲ. ಆದರೆ, ಈ ಶರೀರಕ್ಕೆ ಕೊನೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕಿ ಶೀಲಾ ಎನ್. ಎಸ್., ಅರ್ಜುಮಂದ ಅಜರ, ರಾಜಕುಮಾರ ಆಲ್ಲೂರೆ, ಸುಚಿತಾನಂದ ಮಲ್ಕಾಪೂರೆ, ಮಹಾದೇವಿ ಹೆಬ್ಬಾಳೆ, ಮಹೇಶ್ವರಿ ಹಾಜರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.