ADVERTISEMENT

ವಿಶ್ವ ಹೃದಯ ದಿನಾಚರಣೆ: ಹೃದಯ ಆರೋಗ್ಯ ಕಾಪಾಡಿ- ನಾಗೇಶ ಡಿ.ಎಲ್ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 15:18 IST
Last Updated 29 ಸೆಪ್ಟೆಂಬರ್ 2021, 15:18 IST
ಬೀದರ್‌ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ನಿತಿನ್ ಗುದಗೆ ಮಾತನಾಡಿದರು. ಡಾ.ಮಹೇಶ ಬಿರಾದಾರ, ಡಾ. ಚಂದ್ರಕಾಂತ ಗುದಗೆ, ನಾಗೇಶ ಡಿ.ಎಲ್, ಡಾ.ವಿ.ಜಿ. ರೆಡ್ಡಿ, ಡಾ.ಕೃಷ್ಣಾರೆಡ್ಡಿ  ಇದ್ದರು
ಬೀದರ್‌ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ನಿತಿನ್ ಗುದಗೆ ಮಾತನಾಡಿದರು. ಡಾ.ಮಹೇಶ ಬಿರಾದಾರ, ಡಾ. ಚಂದ್ರಕಾಂತ ಗುದಗೆ, ನಾಗೇಶ ಡಿ.ಎಲ್, ಡಾ.ವಿ.ಜಿ. ರೆಡ್ಡಿ, ಡಾ.ಕೃಷ್ಣಾರೆಡ್ಡಿ  ಇದ್ದರು   

ಬೀದರ್: ಪ್ರತಿಯೊಬ್ಬರೂ ಹೃದಯ ಆರೋಗ್ಯ ಕಾಪಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಸಲಹೆ ಮಾಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬ್ರಿಮ್ಸ್ ಬೋಧಕ ಆಸ್ಪತ್ರೆ ಹಾಗೂ ಗುದಗೆ ಆಸ್ಪತ್ರೆ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡದ ಜೀವನ, ಹಾನಿಕಾರಕ ಆಹಾರ ಪದ್ಧತಿ, ಧೂಮಪಾನ, ಮದ್ಯಪಾನಗಳ ಕಾರಣ ಹೃದ್ರೋಗಗಳ ಪ್ರಮಾಣ ಅಧಿಕವಾಗಿದೆ. ಹೀಗಾಗಿ ಹೃದಯಕ್ಕೆ ಮಾರಕವಾಗುವಂಥ ಅಂಶಗಳ ಕುರಿತು ಜನಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ತಿಳಿಸಿದರು.

ADVERTISEMENT

ಹೃದ್ರೋಗ ತಜ್ಞ ಡಾ.ನಿತಿನ್ ಗುದಗೆ ಮಾತನಾಡಿ, ಪ್ರಸ್ತುತ ಹೃದಯ ರೋಗದ ಕಾರಣ ಹೆಚ್ಚು ಸಾವುಗಳು ಸಂಭವಿಸುತ್ತಿವೆ ಎಂದು ಹೇಳಿದರು.

ಹೃದಯ ರೋಗಗಳ ತಡೆಗೆ ತುಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ ತ್ಯಜಿಸಬೇಕು. ಆರೋಗ್ಯಕರ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಜಂಕ್ ಫುಡ್, ಪಾಕೇಟ್ ಫುಡ್ ಸೇವನೆಯಿಂದ ದೂರ ಇರಬೇಕು. ವ್ಯಾಯಾಮ ಮಾಡಬೇಕು. ಮಧುಮೇಹ, ರಕ್ತದೊತ್ತಡ ಕಾಯಿಲೆ ಇರುವವರು ನಿಯಮಿತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಾಂಸಾಹಾರ, ಉಪ್ಪಿನಾಂಶ ಕಡಿಮೆ ಸೇವಿಸಬೇಕು. ಅಧಿಕ ಕೊಲೆಸ್ಟ್ರಾಲ್ ಇರುವ ಆಹಾರ ಸೇವಿಸಬಾರದು ಎಂದು ಹೇಳಿದರು.

ಗುದಗೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಚಂದ್ರಕಾಂತ ಗುದಗೆ ಮಾತನಾಡಿ, ಹೃದಯ ಸಂರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ವ್ಯಾಪಕ ಪ್ರಚಾರ ಮಾಡಬೇಕಾಗಿದೆ ಎಂದು ತಿಳಿಸಿದರು.

ಸರ್ಕಾರಿ ಇಲ್ಲವೇ ಖಾಸಗಿ ವೈದ್ಯರು ವಾಟ್ಸ್‍ಆ್ಯಪ್‍ನಲ್ಲಿ ಇಸಿಜಿ ವರದಿ ಕಳುಹಿಸಿದರೆ ತಮ್ಮ ಆಸ್ಪತ್ರೆಯಲ್ಲಿ ಅರ್ಧ ಗಂಟೆಯೊಳಗೆ ಅದು ಹೃದಯ ರೋಗವೋ ಅಥವಾ ಅಲ್ಲವೋ ಎನ್ನುವುದನ್ನು ಖಚಿತಪಡಿಸಲಾಗುವುದು. ಅಗತ್ಯವಿದ್ದರೆ ಚಿಕಿತ್ಸೆಗೆ ಸಲಹೆ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಮಾತನಾಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಾರೆಡ್ಡಿ, ಡಾ.ಮಹೇಶ ಬಿರಾದಾರ, ಡಾ.ಶಂಕರ ದೇಶಮುಖ, ಡಾ.ಮಹೇಶ ತೊಂಡಾರೆ, ಡಾ. ಸಚಿನ್ ಗುದಗೆ, ಡಾ.ವೀರೇಶ, ಪ್ರವೀಣಕುಮಾರ ಉಪಸ್ಥಿತರಿದ್ದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶ್ರಾವಣ ಜಾಧವ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.