ಬೀದರ್: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಅಕ್ಟೋಬರ್ 29ರಂದು ನಗರದ ಗುದಗೆ ಮಲ್ಟಿ ಅಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೆಗಾ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ ಎಂದು ನರರೋಗ ತಜ್ಞ ಡಾ. ಪ್ರಶಾಂತ್ ಅಳ್ಳೆ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯ ವರೆಗೆ ಉಚಿತ ತಪಾಸಣಾ ಶಿಬಿರ ನಡೆಯಲಿದೆ. 18 ವರ್ಷ ಮೇಲಿನ ಯಾರು ಬೇಕಾದರೂ ನೇರವಾಗಿ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಹೈ ರಿಸ್ಕ್ ಇರುವವರು, ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವವರು ಬಂದು ಉಚಿತವಾಗಿ ಸ್ಕ್ರೀನಿಂಗ್ ಮಾಡಿಸಬಹುದು. ಎಂಆರ್‌ಐ ಸ್ಕ್ಯಾನಿಂಗ್‌ಗೆ ವಿಶೇಷ ರಿಯಾಯಿತಿ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪಾರ್ಶ್ವವಾಯು ರೋಗದ ಬಗ್ಗೆ ಹೆಚ್ಚಿನವರಿಗೆ ತಿಳಿವಳಿಕೆ ಇಲ್ಲ. ಈ ಮೆಗಾ ಕ್ಯಾಂಪ್ ಮೂಲಕ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪಾರ್ಶ್ವವಾಯು ಸಮಸ್ಯೆಗೆ ಒಳಗಾದವರು ಪೂಜೆ, ಹರಕೆ, ತಾಯತ ಕಟ್ಟಿಸಿಕೊಳ್ಳುವ ಪದ್ಧತಿ ಇದೆ. ಅದೊಂದು ನಂಬಿಕೆ. ಆ ನಂಬಿಕೆ ಇರಲಿ. ಆದರೆ, ಈ ಸಮಸ್ಯೆಯಿಂದ ಬಳಲುತ್ತಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ, ತಪಾಸಣೆಗೆ ಒಳಪಡುವುದು ಬಹಳ ಉತ್ತಮ. ಪಾರ್ಶ್ವವಾಯು ನರರೋಗಕ್ಕೆ ಸಂಬಂಧಿಸಿದ ಕಾಯಿಲೆ. ಇದರ ಬಗ್ಗೆ ಅಸಡ್ಡೆ ತೋರುವುದು ಸರಿಯಲ್ಲ ಎಂದು ಹೇಳಿದರು.
ಯಾರೇ ಪಾರ್ಶ್ವವಾಯು ಸಮಸ್ಯೆಗೆ ಒಳಗಾದರೆ ಮೊದಲ ನಾಲ್ಕು ಗಂಟೆ ಬಹಳ ಮುಖ್ಯವಾದುದು. ಆ ಅವಧಿಯ ಪ್ರತಿಯೊಂದು ನಿಮಿಷ ಬಹಳ ಮಹತ್ವದ್ದು. ಆ ಅವಧಿಯೊಳಗೆ ತಡಮಾಡದೇ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರೆ ಅಂತಹವರು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ನಗರದ ಗುದಗೆ ಆಸ್ಪತ್ರೆಯಲ್ಲಿ ಮಹಾನಗರಗಳಲ್ಲಿ ಇರುವ ಎಲ್ಲಾ ರೀತಿಯ ಸಕಲ ಸೌಲಭ್ಯ ಇದೆ. ಅತ್ಯಾಧುನಿಕ ಪದ್ಧತಿ ಪ್ರಕಾರ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ. ಮಹಾನಗರಗಳಿಗಿಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಒಳಪಡಬಹುದು. ಅತ್ಯುತ್ತಮ ತಜ್ಞ ವೈದ್ಯರ ತಂಡವೇ ಇದೆ ಎಂದು ಮಾಹಿತಿ ಹಂಚಿಕೊಂಡರು.
ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ನಮ್ಮ ಆಸ್ಪತ್ರೆಯಲ್ಲಿ ನೆರವೇರಿಸಲಾಗುತ್ತಿದೆ. ಈ ಹಿಂದೆ ಯಾವುದೇ ಶಸ್ತ್ರಚಿಕಿತ್ಸೆ ಮಾಡಬೇಕಿದ್ದರೆ ಹೈದರಾಬಾದ್, ಬೆಂಗಳೂರು ಸೇರಿದಂತೆ ಇತರೆ ಮಹಾನಗರಗಳ ಆಸ್ಪತ್ರೆಗೆ ಕಳಿಸುತ್ತಿದ್ದೆವು. ಈಗ ನಮ್ಮಲ್ಲೇ ಚಿಕಿತ್ಸೆ ಲಭ್ಯವಿರುವ ಕಾರಣ ಅನ್ಯ ಮಹಾನಗರಗಳಿಗೆ ಹೋಗುವುದು ತಪ್ಪಿದೆ ಎಂದರು.
ಡಾ. ಸಚಿನ್ ಗುದಗೆ ಮಾತನಾಡಿ, ಡಾ. ಪ್ರಶಾಂತ್ ಅಳ್ಳೆ ಅವರು 14 ವರ್ಷಗಳ ಅನುಭವ ಹೊಂದಿದ್ದು, ಇದುವರೆಗೆ 3 ಸಾವಿರ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. 18,500 ನ್ಯುರೋ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ದೇಶ–ವಿದೇಶಗಳ ವಿವಿಧ ಹೆಸರಾಂತ ಆಸ್ಪತ್ರೆಗಳಿಂದ ಅವರಿಗೆ ಬೇಡಿಕೆ ಬಂದಿದ್ದರೂ, ಬೀದರ್ ಜಿಲ್ಲೆಯ ಭಾಲ್ಕಿಯವರಾದ ಕಾರಣ ತವರು ಜಿಲ್ಲೆಯ ಪ್ರೀತಿಯಿಂದ ಇಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಡಾ. ನಿತಿನ್ ಗುದಗೆ, ಡಾ. ಮಹೇಶ ತೊಂಡಾರೆ, ಡಾ. ವೈಭವ್ ಭದಭದೆ, ಡಾ. ಸುಖಾನಂದ, ಆಡಳಿತಾಧಿಕಾರಿ ಶ್ರೀಕಾಂತ ಸ್ವಾಮಿ ಹಾಜರಿದ್ದರು.
ಪ್ರತಿಯೊಬ್ಬರೂ ನಿತ್ಯ ಯೋಗ ಧ್ಯಾನ ಮಾಡಬೇಕು. ಕನಿಷ್ಠ 7 ರಿಂದ 8 ಗಂಟೆ ನಿದ್ರೆ ಮಾಡಬೇಕು. ಸ್ಕ್ರೀನ್ ಎದುರು ಹೆಚ್ಚು ಸಮಯ ಕಳೆಯದಂತೆ ಎಚ್ಚರ ವಹಿಸಿದರೆ ಆರೋಗ್ಯದಿಂದ ಇರಬಹುದು. ಅತಿಯಾದ ಒತ್ತಡ ಬದಲಾದ ಜೀವನಶೈಲಿಯಿಂದಲೇ ಪಾರ್ಶ್ವವಾಯು ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆಡಾ. ಪ್ರಶಾಂತ್ ಅಳ್ಳೆ ನರರೋಗ ತಜ್ಞ
ಹಿಂದುಳಿದ ಬೀದರ್ ಜಿಲ್ಲೆಯಲ್ಲಿ ಇದುವರೆಗೆ ನರರೋಗಕ್ಕೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ ಇತ್ತು. ಈಗ ಅದು ನೀಗಿದೆ. ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸಾ ಸೌಲಭ್ಯ ಲಭ್ಯ ಇರುವುದರಿಂದ ಜನ ಮಹಾನಗರಗಳಿಗೆ ಹೋಗಬೇಕಿಲ್ಲ. ವೈದ್ಯಲೋಕದಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗುವುದು ಬಹಳ. ಪ್ರತಿಯೊಂದು ನಿಮಿಷವೂ ಮುಖ್ಯಡಾ. ಚಂದ್ರಕಾಂತ ಗುದಗೆ ಸಂಸ್ಥಾಪಕ ಅಧ್ಯಕ್ಷ ಗುದಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ