ಕಮಲನಗರ: ಪದವೀಧರ ಯುವಕ ನೌಕರಿ ಆಸೆ ಬಿಟ್ಟು ತನ್ನ ಸ್ವಂತ ಜಮೀನಿನಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆದು ಯುವಕರಿಗೆ ಮಾದರಿಯಾಗಿದ್ದಾರೆ. ಬೇಸಾಯದ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕು ಕೇಂದ್ರದಿಂದ 5 ಕಿ.ಮೀ ಅಂತರದಲ್ಲಿರುವ ಮದನೂರ ಗ್ರಾಮದ ಪದವೀಧರ ರೈತ ಜಯಪ್ರಕಾಶ ಅವರು ತನ್ನ ಸ್ವಂತ 20 ಎಕರೆ ಜಮೀನಿನಲ್ಲಿ ಕಬ್ಬು, ಉದ್ದು, ಹೆಸರು, ತೊಗರಿ ಮತ್ತು ಜೋಳ ಮುಂತಾದ ಬೆಳೆಗಳ ಜತೆಗೆ ಹೈನುಗಾರಿಕೆ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.
ಕೃಷಿ ಕ್ಷೇತ್ರದ ಜತೆ ಆಕಳು, ಎಮ್ಮೆ ಮತ್ತು ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಒಂದು ಎಕರೆ ಜಮೀನಿನಲ್ಲಿ 40 ರಿಂದ 50 ಟನ್ ಕಬ್ಬು ಬೆಳೆಯುತ್ತಿದ್ದು, ಒಟ್ಟು 10 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಾರೆ. ತಮ್ಮ ಜಮೀನಿನಲ್ಲಿ ₹ 4 ಲಕ್ಷ ವೆಚ್ಚದ ಶೆಡ್ ನಿರ್ಮಿಸಿದ್ದು, 5 ಆಕಳು ಮತ್ತು 3 ಎಮ್ಮೆಗಳನ್ನು ಸಾಕಿದ್ದಾರೆ.
ಆಕಳು ಮತ್ತು ಎಮ್ಮೆಗಳಿಂದ ಪ್ರತಿನಿತ್ಯ 25 ರಿಂದ 50 ಲೀಟರ್ ಹಾಲು ಮಾರಾಟ ಮಾಡುತ್ತಾರೆ. ಸಾವಯವ ಗೊಬ್ಬರ ಬಳಕೆ ಮಾಡಿ ತೊಗರಿ, ಕಬ್ಬು, ಸೋಯಾಬಿನ್, ಬಿಳಿಜೋಳ, ಹೆಸರು ಮುಂತಾದ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.
ಹೊಲದಲ್ಲಿ ಶೆಡ್ ನಿರ್ಮಿಸಿದ ಅವರು 300 ನಾಟಿ ಕೋಳಿಗಳ ಸಾಕಾಣಿಕೆ ಮಾಡಿದ್ದಾರೆ. ನಾಟಿ ಕೋಳಿ ಮೊಟ್ಟೆ ಮತ್ತು ಮಾಂಸ ಸದ್ಯ ಮಾರಾಟ ಮಾಡದಿರಲು ನಿರ್ಧರಿಸಿರುವ ಅವರು, ಕೋಳಿಗಳನ್ನು ಒಂದು ಸಾವಿರಕ್ಕೆ ಹೆಚ್ಚಿಸಿದ ಬಳಿಕ ಮಾರಾಟ ಮಾಡಿ ಹಣ ಸಂಪಾದಿಸುವ ಲೆಕ್ಕಾಚಾರ ಹೊಂದಿದ್ದಾರೆ ಜೈಪ್ರಕಾಶ.
ವನ್ಯಜೀವಗಳಿಂದ ಬೆಳೆ ರಕ್ಷಣೆ ಪಡೆಯಲು ಮೂರು ಸೋಲಾರ್ ಪ್ಯಾನೆಲ್ ಅಳವಡಿಸಿ ಕಬ್ಬು ಬೆಳೆ ಸುತ್ತಲೂ ಸೋಲಾರ್ ತಂತಿ ಬೇಲಿ ಅಳವಡಿಸಲಾಗಿದೆ. ಇದರಿಂದ ಬೆಳೆ ರಕ್ಷಣೆ ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದೇನೆಜಯಪ್ರಕಾಶ ಬಿರಾದಾರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.