ADVERTISEMENT

ಅಧಿಕಾರಶಾಹಿಯ ನಿರ್ಲಕ್ಷ್ಯ ಬಟಾಬಯಲು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 7:50 IST
Last Updated 19 ಅಕ್ಟೋಬರ್ 2012, 7:50 IST

ಚಾಮರಾಜನಗರ: ತಾಲ್ಲೂಕು ಕಚೇರಿಯಲ್ಲಿ ರೈತರು ಹಾಗೂ ನಾಗರಿಕರ ಕೆಲಸಕ್ಕೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎನ್. ಜಯರಾಂ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಕಚೇರಿಯ ಮುಖ್ಯದ್ವಾರದಲ್ಲಿರುವ ಆರ್‌ಟಿಸಿ ವಿತರಣಾ ಕೌಂಟರ್ ಮುಂಭಾಗ ಸಾಲುಗಟ್ಟಿ ನಿಂತಿದ್ದ ರೈತರ ಅಹವಾಲು ಆಲಿಸಿದರು. ಆ ವೇಳೆ ನಾಗರಿಕರು ಹಾಗೂ ರೈತರು ಕಚೇರಿ ಕೆಲಸ ಕಾರ್ಯ ಮಾಡಿಕೊಡಲು ಅಧಿಕಾ ರಿಗಳು ಅನಗತ್ಯವಾಗಿ ಅಲೆದಾಡಿ ಸು ತ್ತಿದ್ದಾರೆ ಎಂದು ದೂರಿನ ಮಳೆ ಸುರಿಸಿ ದರು. ಆ ಮೂಲಕ ಅಧಿಕಾರಶಾಹಿಯ ಬಣ್ಣವನ್ನು ಬಯಲು ಮಾಡಿದರು.

ನಂತರ ಜಿಲ್ಲಾಧಿಕಾರಿ ಅವರು, ಭೂಮಾಪನ ವಿಭಾಗಕ್ಕೆ ತೆರಳಿದರು. ಅರ್ಜಿ ವಿಲೇವಾರಿ ಕುರಿತು ಅಧಿಕಾರಿ ಗಳು ಹಾಗೂ ಭೂಮಾಪಕರನ್ನು ಪ್ರಶ್ನಿ ಸಿದರು. ಅಧಿಕಾರಿಗಳು ಕೊಟ್ಟ ಉತ್ತ ರದಿಂದ ಅಸಮಾಧಾನಗೊಂಡರು.

ಅಧಿಕಾರಿಗಳನ್ನು ತರಾಟೆ ತೆಗೆದು ಕೊಂಡ ಅವರು, `ಅರ್ಜಿ ಸಲ್ಲಿಕೆಯ ಜ್ಯೇಷ್ಠತೆ ಆಧಾರದ ಮೇಲೆ ವಿಲೇವಾರಿ ಮಾಡಬೇಕು. ಮನಸ್ಸಿಗೆ ಬಂದಂತೆ ಕೆಲಸ ನಿರ್ವಹಿಸಬಾರದು. ಹಳೆಯ ಮಾನದಂಡದ ಆಧಾರದ ಮೇಲೆ ಕೆಲಸ ನಿರ್ವಹಿಸಿದರೆ ಸಾರ್ವಜನಿಕರ ಸಮಸ್ಯೆ ಇತ್ಯರ್ಥವಾಗಲು ವಿಳಂಬವಾಗುತ್ತದೆ.

ಕೇವಲ ಕಚೇರಿ ಅವಧಿಯಲ್ಲಿ ಮಾತ್ರ ಕಡತ ವಿಲೇವಾರಿಗೆ ಗಮನಹರಿಸಿದರೆ ಸಾಲದು. ಹೆಚ್ಚುವರಿ ಅವಧಿ ಹಾಗೂ ಸಾರ್ವತ್ರಿಕ ರಜೆಯಲ್ಲೂ ಕೆಲಸ ನಿರ್ವಹಿಸಬೇಕು. ಬಾಕಿ ಉಳಿದಿರುವ ಸಾರ್ವಜನಿಕರ ಭೂಮಾಪನ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು~ ಎಂದು ಸೂಚಿಸಿದರು.

ಅರ್ಜಿಗಳ ಆಧಾರದ ಮೇಲೆ ಗ್ರಾಮಗಳಿಗೆ ತೆರಳಿ ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ದುರಸ್ತು, 11ಇ ಸ್ಕೆಚ್, ಹದ್ದುಬಸ್ತು ಕೆಲಸವನ್ನು ಕಾಲಮಿತಿಯೊಳಗೆ ಪೂರ್ಣ ಗೊಳಿಸ ಬೇಕು. ಪ್ರತಿ ಸೋಮವಾರ ಹಾಗೂ ಶುಕ್ರವಾರ 11ಇ ಸ್ಕೆಚ್ ವಿತರಿಸಬೇಕು. ಬಾಕಿ ಇರುವ 656 ಸಂಯೋಜಿತ ಮ್ಯೂಟೇಷನ್ ಪೋಡಿ (ಐಎಂಪಿ) ಕಡತಗಳನ್ನು ಈ ಮಾಸಾಂತ್ಯದೊಳಗೆ ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದರು.

ಪ್ರಸ್ತುತ ಬಾಕಿ ಇರುವ 816 ಹದ್ದುಬಸ್ತು ಕಡತಗಳನ್ನು ಡಿ. 1ರಿಂದ ಕೈಗೆತ್ತಿಕೊಂಡು 15 ದಿನದೊಳಗೆ ವಿಲೇ ವಾರಿ ಮಾಡಬೇಕು. ಬಾಕಿ ಉಳಿದ ಎಲ್ಲ ಪ್ರಕರಣಗಳ ಕಡತವನ್ನು ವರ್ಷಾಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದರು.

ಇದೇ ವೇಳೆ ಸಾರ್ವಜನಿಕರು, `ಕೆಲವು ಸರ್ವೇಯರ್‌ಗಳು ಸೌಜನ್ಯ ದಿಂದ ವರ್ತಿಸುತ್ತಿಲ್ಲ. ಕಚೇರಿಗೆ ಬಂದರೆ ಸ್ಪಂದಿಸುವುದಿಲ್ಲ~ ಎಂದು ಜಿಲ್ಲಾಧಿ ಕಾರಿಗೆ ಅಹವಾಲು ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು, ಸರ್ವೇ ವಿಭಾಗದ ಸಮಗ್ರ ಸುಧಾರಣೆಗೆ ಸೂಚಿಸಿದ್ದೇನೆ. ಸಿಬ್ಬಂದಿ ಅನುಚಿತವಾಗಿ ವರ್ತಿಸಿದರೆ ಅಥವಾ ನಿಯಮಬಾಹಿರವಾಗಿ ಕೆಲಸ ಮಾಡುವ ಬಗ್ಗೆ ಲಿಖಿತ ದೂರು ನೀಡಿದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.