ADVERTISEMENT

ಆರೋಗ್ಯದ ಅರಿವಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಮೇ 2012, 8:10 IST
Last Updated 28 ಮೇ 2012, 8:10 IST

ಚಾಮರಾಜನಗರ: `ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆದುಕೊಂಡು ಸ್ವಾವಲಂಬನೆ ಸಾಧಿಸುವುದರೊಂದಿಗೆ ಆರೋಗ್ಯ ಕುರಿತು ಅರಿವು ಹೊಂದಬೇಕು~ ಎಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ಆಪ್ತ ಸಮಾಲೋಚಕ ಸುರೇಶ್ ಸಲಹೆ ನೀಡಿದರು.

ತಾಲ್ಲೂಕಿನ ಅಮ್ಮನಪುರದಲ್ಲಿ ಇತ್ತೀಚೆಗೆ ಮೈಸೂರಿನ ಓಡಿಪಿ ಸಂಸ್ಥೆ, ಮಹಿಳಾ ಮಹಿಳೋದಯ ಒಕ್ಕೂಟ, ಚೇತನ ಕೇಂದ್ರ ಸಮಿತಿಯಿಂದ  ಏಡ್ಸ್ ತಡೆಗಟ್ಟುವಿಕೆ ಕುರಿತು ನಡೆದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಏಡ್ಸ್‌ನಂತಹ ಮಾರಕ ರೋಗಗಳ ಬಗ್ಗೆ ಜಾಗೃತರಾಗಬೇಕಿದೆ. ರಾಜ್ಯದಲ್ಲಿ 5 ಲಕ್ಷ ಜನರು ಏಡ್ಸ್ ಹಾಗೂ ಎಚ್‌ಐವಿ ಸೋಂಕಿಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿಯೂ 2,500 ಮಂದಿ ಎಚ್‌ಐವಿ ಸೋಂಕುಪೀಡಿತರಿದ್ದಾರೆ. ಕೆಲವರಿಗೆ ಈ ರೋಗ ಕುರಿತು ಪ್ರಾಥಮಿಕ ಮಾಹಿತಿಯೂ ಇಲ್ಲ ಎಂದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏಡ್ಸ್ ತಡೆಗಟ್ಟುವ ಬಗ್ಗೆ ಕಾರ್ಯಕ್ರಮ ರೂಪಿಸಲಾಗಿದೆ.

 ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ನೀಡಲಾಗುತ್ತಿದೆ ಎಂದು ಹೇಳಿದರು.

ಓಡಿಪಿ ಸಂಸ್ಥೆಯ ವಲಯಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿ, `ಸಂಸ್ಥೆಯು 4 ಜಿಲ್ಲೆಗಳಲ್ಲಿ ಮಹಿಳೆಯರ ಅಭಿವೃದ್ಧಿಗೆ ದುಡಿಯುತ್ತಿದೆ~ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕರ್ತೆ ಸ್ಟೆಲ್ಲಾಮೇರಿ, ಗ್ರಾಮ ಪಂಚಾಯಿತಿ ಸದಸ್ಯ ಗುರುಸ್ವಾಮಿ, ಮಾಜಿ ಉಪಾಧ್ಯಕ್ಷೆ ಮಂಗಳಮ್ಮ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರಭಾವತಿ, ಅನಿತಾ, ಸುನಿತಾ, ಮಧು ಇತರರು ಹಾಜರಿದ್ದರು. 

ಮುಷ್ಕರಕ್ಕೆ ಬೆಂಬಲ
ಮೈಸೂರು: ಮಂಡ್ಯ ಜಿಲ್ಲೆ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರು ನಡೆಸುತ್ತಿರುವ ಮುಷ್ಕರಕ್ಕೆ ಮೈಸೂರು ಸಿಟಿ ಲೋಕಲ್ ಲಾರಿ ಮಾಲೀಕರ ಸಂಘ ಬೆಂಬಲ ವ್ಯಕ್ತಪಡಿಸಿದೆ.

ನಗರದ ಶೇ 40 ರಷ್ಟು ಲಾರಿಗಳು ಮಂಡ್ಯ ಜಿಲ್ಲೆಯಿಂದ ಮೈಸೂರಿಗೆ ಜೆಲ್ಲಿ, ಸೈಜುಗಲ್ಲುಗಳನ್ನು ಸರಬರಾಜು ಮಾಡುತ್ತಿವೆ.

ಅಲ್ಲದೇ ಶೇ 70 ರಷ್ಟು ಜೆಲ್ಲಿ, ಸೈಜುಗಲ್ಲು ನಗರಕ್ಕೆ ಪೂರೈಕೆಯಾಗುತ್ತಿರುವುದು ಮಂಡ್ಯದಿಂದಲೇ. ಇವರ ಮುಷ್ಕರದಿಂದಾಗಿ ನಗರದ ಲಾರಿ ಉದ್ಯಮದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಸರ್ಕಾರ ಮಂಡ್ಯ ಜಿಲ್ಲೆ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಸಿಟಿ ಲೋಕಲ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಕೋದಂಡರಾಮು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.