ADVERTISEMENT

ಆವಕ ಹೆಚ್ಚಳ: ಈರುಳ್ಳಿ ಬೆಲೆ ಇಳಿಕೆ

ತರಕಾರಿ–ಹೂ ಸ್ಥಿರ, ತೆಂಗಿನಕಾಯಿ ದುಬಾರಿ, ಹಣ್ಣು ಅಗ್ಗ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 10:44 IST
Last Updated 6 ಮಾರ್ಚ್ 2018, 10:44 IST
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಈರುಳ್ಳಿ
ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಈರುಳ್ಳಿ   

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಕಳೆದ ಮೂರು, ನಾಲ್ಕು ತಿಂಗಳಿನಿಂದ ಏರಿಳಿತ ಕಾಣುತ್ತಿದ್ದ ದಪ್ಪ ಈರುಳ್ಳಿ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಗ್ರಾಹಕರ ಪಾಲಿಗೆ ಈರುಳ್ಳಿ ರುಚಿ ಹೆಚ್ಚಾಗಿದೆ.

ಮಾರುಕಟ್ಟೆಯಲ್ಲಿ ದಪ್ಪ ಈರುಳ್ಳಿ ಕೆ.ಜಿ.ಗೆ ₹20ರಿಂದ 25ಕ್ಕೆ ಮಾರಾಟವಾಗುತ್ತಿದೆ. ಸಣ್ಣ ಈರುಳ್ಳಿ ಕೆ.ಜಿ.ಗೆ ₹ 30ರಿಂದ 40 ಧಾರಣೆಯಿದೆ.

‘ಈರುಳ್ಳಿ ಕೊರತೆಯಿಂದ ದರದಲ್ಲಿ ಏರಿಳಿತವಾಗುತ್ತಿತ್ತು. ಕಳೆದ ಎರಡು ತಿಂಗಳಿನಿಂದ ಮಾರುಕಟ್ಟೆಗೆ ಹೊರಜಿಲ್ಲೆ ಹಾಗೂ ಸುತ್ತಲಿನ ಗ್ರಾಮಗಳಿಂದ ಹೆಚ್ಚಿನ ಪ್ರಮಾಣದ ಈರುಳ್ಳಿ ಪೂರೈಕೆಯಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಆವಕ ಹೆಚ್ಚಳವಾಗಿದ್ದು, ಬೇಡಿಕೆ ಕುಸಿತವಾಗಿದೆ. ಇದೇ ಬೆಲೆ ಇಳಿಕೆಗೆ ಕಾರಣ’ ಎಂದು ವ್ಯಾಪಾರಿ ಮಹದೇವಯ್ಯ ತಿಳಿಸಿದರು.

ADVERTISEMENT

ತಕರಾರಿ ಬೆಲೆ ಸ್ಥಿರ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕಳೆದೆರಡು ವಾರ ದಿಂದ ಏರಿಳಿತ ಕಾಣುತ್ತಿದ್ದು, ವ್ಯಾಪಾರದ ಭರಾಟೆ ಜೋರಾಗಿದೆ. ಹಸಿಮೆಣಸಿನ ಕಾಯಿ, ಬೀನ್ಸ್‌, ಬೀಟ್‌ರೂಟ್‌, ಕೋಸು, ಟೊಮೆಟೊ ಮತ್ತು ಹಣ್ಣುಗಳ ಬೆಲೆಗಳು ಇಳಿಕೆಯಾಗಿದೆ. ದಪ್ಪ ಮೆಣಸಿನಕಾಯಿ, ಆಲೂಗಡ್ಡೆ, ಹೂಕೋಸು, ಸೌತೆಕಾಯಿ, ಕ್ಯಾರೆಟ್‌, ಹೀರೇಕಾಯಿ ಬೆಲೆ ಸ್ಥಿರವಾಗಿದೆ.

‘ಮಾರುಕಟ್ಟೆಗೆ ಹಾಸನ, ಮೈಸೂರು ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ತರಕಾರಿ ಪೂರೈಕೆಯಾಗುತ್ತಿದ್ದು, ಎರಡು ವಾರಗಳಿಂದ ಕೆಲವು ತರಕಾರಿಗಳ ಸರಬರಾಜು ಹೆಚ್ಚಾಗಿದೆ. ಶುಭ ಸಮಾರಂಭಗಳು, ಹಬ್ಬ, ಜಾತ್ರೆ ನಡೆಯುತ್ತಿದ್ದು, ವ್ಯಾಪಾರವೂ ಹೆಚ್ಚಾಗಿದೆ’ ಎಂದು ತರಕಾರಿ ವ್ಯಾಪಾರಿ ರಘು ‘ಪ್ರಜಾವಾಣಿ’ಗೆ ತಿಳಿಸಿದರು.

ತೆಂಗಿನಕಾಯಿ ಬೆಲೆ ಏರಿಕೆ: ಇಳುವರಿ ಕುಸಿತದಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಆವಕ ಕಡಿಮೆಯಾಗಿದೆ. ಜತೆಗೆ, ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ಪೂರೈಕೆಯಾಗುತ್ತಿರುವುದರಿಂದ ವಾರದಿಂದ ವಾರಕ್ಕೆ ತೆಂಗಿನಕಾಯಿ ಬೆಲೆ ಏರಿಕೆಯಾಗುತ್ತಿದೆ.

ಮಾರುಕಟ್ಟೆಯಲ್ಲಿ ಸಾಧಾರಣ ಗಾತ್ರದ ಒಂದು ಕಾಯಿಗೆ ₹ 30 ಹಾಗೂ ದೊಡ್ಡ ಗಾತ್ರದ ಕಾಯಿಗೆ ₹ 40ರಿಂದ 50 ಬೆಲೆಯಿದ್ದು, ಕಾಯಿ ಖರೀದಿಸಲು ಗ್ರಾಹಕರು ಹತ್ತಾರು ಬಾರಿ ಯೋಚಿಸುವಂತಾಗಿದೆ.

‘ಪೂರೈಕೆ ಕುಸಿತದಿಂದ ಸಹಜವಾಗಿಯೇ ತೆಂಗಿನಕಾಯಿ ಬೆಲೆ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ’ ಎನ್ನುವುದು ತೆಂಗಿನಕಾಯಿ ವ್ಯಾಪಾರಿಗಳ ಅಭಿಪ್ರಾಯ.

ಹಣ್ಣು ಅಗ್ಗ, ಹೂವು ಸ್ಥಿರ: ಮಾರುಕಟ್ಟೆಯಲ್ಲಿ ಬಾಳೆಹಣ್ಣು ಸೇರಿದಂತೆ ಇತರೆ ಹಣ್ಣುಗಳ ಬೆಲೆ ಕೊಂಚ ಇಳಿಕೆಯಾಗಿದೆ. ಹೂವಿನ ಧಾರಣೆ ಕಳೆದ ವಾರದಷ್ಟೇ ಇದ್ದು, ಸ್ಥಿರತೆ ಕಾಯ್ದುಕೊಂಡಿದೆ.

ಏಲಕ್ಕಿ ಬಾಳೆಹಣ್ಣು ಕಳೆದ ವಾರಕ್ಕಿಂತ ಕೆ.ಜಿ.ಗೆ ₹ 10 ರಿಂದ 15 ಇಳಿಕೆಯಾಗಿದ್ದು, ಕೆ.ಜಿಗೆ ₹ 40 ರಿಂದ 50 ತಲುಪಿದೆ. ಪಚ್ಚಬಾಳೆ ಹಣ್ಣು ₹ 30ಕ್ಕೆ ಮಾರಾಟವಾಗುತ್ತಿದೆ.

ಚೆಂಡುಹೂವು ₹ 10, ಮಲ್ಲಿಗೆ ₹ 20ರಿಂದ 30, ಕಾಕಡ ₹ 20ರಿಂದ 30, ಕನಕಾಂಬರ ₹ 30ರಿಂದ 50 ಹಾಗೂ ಹೂವಿನ ಹಾರಕ್ಕೆ ₹ 50ರಿಂದ 300ರವರೆಗೂ ಬೆಲೆ ನಿಗದಿಪಡಿಸಲಾಗಿದೆ.
***
ನಗರದಲ್ಲಿ ದೂಳು ಹೆಚ್ಚಾಗುತ್ತಿದೆ. ಇದರಿಂದ ಬೀದಿಬದಿಯಲ್ಲಿ ಮಾರಾಟಕ್ಕಿಟ್ಟಿರುವ ತರಕಾರಿಗೆ ಬೆಲೆ ಕಡಿಮೆ ಇದ್ದರೂ ಕೊಳ್ಳಲು ಭಯವಾಗುತ್ತದೆ.
–ಮಹೇಂದ್ರ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.