ADVERTISEMENT

ಎಲ್ಲ ವಿದ್ಯಾರ್ಥಿಗಳಿಗೂ ಬಸ್‌ಪಾಸ್‌ ನೀಡಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 5:56 IST
Last Updated 16 ಜೂನ್ 2017, 5:56 IST
ಎಲ್ಲ ವಿದ್ಯಾರ್ಥಿಗಳಿಗೂ ಬಸ್‌ಪಾಸ್‌ ನೀಡಿ
ಎಲ್ಲ ವಿದ್ಯಾರ್ಥಿಗಳಿಗೂ ಬಸ್‌ಪಾಸ್‌ ನೀಡಿ   

ಚಾಮರಾಜನಗರ: ‘ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ಸೌಲಭ್ಯ ನೀಡಬೇಕು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್‌ ಒತ್ತಾಯಿಸಿದರು.

ಮೈಸೂರಿನಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದ 4 ವರ್ಷದ ಸಾಧನೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದಿಂದಲೇ ಉಚಿತ ಬಸ್‌ಪಾಸ್‌ ನೀಡುವುದಾಗಿ ಘೋಷಿಸಿದ್ದಾರೆ.

ಇದರಿಂದ ಶಾಲಾ ಮಕ್ಕಳಲ್ಲಿ ಜಾತಿ ಭೇದ ಬಿತ್ತಿದಂತೆ ಆಗುತ್ತದೆ. ಹಾಗಾಗಿ, ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಬಸ್‌ಪಾಸ್‌ ಸೌಲಭ್ಯ ನೀಡಬೇಕು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ವರ್ಷದ ಹಿಂದೆ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪ್ರವಾಸ ಹಮ್ಮಿಕೊಳ್ಳುವ ಪದ್ಧತಿ ಜಾರಿಗೊಳಿಸಿದ್ದರು. ಈ ಸಂಬಂಧ ಹಲವು ಚರ್ಚೆಗಳಾಗಿ ಅದನ್ನು ಕೈಬಿಡಲಾಯಿತು. ಈಗ ಅವರು ಅದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಶಾಲೆಯಿಂದಲೇ ಜಾತಿ ಬೀಜ: ರಾಜ್ಯ ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಬಿಸಿ ಯೂಟ, ಸೈಕಲ್‌ ವಿತರಣೆ, ವಿದ್ಯಾರ್ಥಿ ವೇತನ, ಪಠ್ಯಪುಸ್ತಕ, ಸಮವಸ್ತ್ರವನ್ನು ನೀಡುತ್ತಿದೆ. ಆದರೆ, ಶಾಲಾ ಚೀಲ, ನೋಟ್‌ಬುಕ್‌ ಹಾಗೂ ಉಚಿತ ಬಸ್‌ ಪಾಸ್‌ ಸೌಲಭ್ಯಗಳನ್ನು ಮಾತ್ರ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡುವುದು ಸರಿಯಲ್ಲ. ಎಲ್ಲರಿಗೂ ಎಲ್ಲ ಸೌಲಭ್ಯ ಗಳನ್ನು ಸಮನಾಗಿ ನೀಡಬೇಕು ಎಂದರು.

ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೌಲಭ್ಯ ನೀಡುವುದರಿಂದ ಇಡೀ ಸಮಾಜ ಅವರನ್ನು ಪ್ರತ್ಯೇಕವಾಗಿ ನೋಡುತ್ತದೆ. ಶಾಲೆಯಿಂದಲೇ ಮಕ್ಕಳಲ್ಲಿ ಜಾತಿ ಭಾವನೆ ಮೂಡಿಸುವುದು ಸರಿ ಯಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಜನ ಪ್ರತಿನಿಧಿಗಳು ಚರ್ಚಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯವನ್ನು ಪ್ರತ್ಯೇಕ ಮಾಡದೆ ಎಲ್ಲರಿಗೂ ಸಮಾನವಾಗಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸ ಬೇಕು ಎಂದರು.

ರಾಜ್ಯದಲ್ಲಿ 10 ವರ್ಷಗಳಲ್ಲಿ 44,301 ಸರ್ಕಾರಿ ಶಾಲೆಗಳು ಮುಚ್ಚಿವೆ. 2 ವರ್ಷದಲ್ಲಿ 10,000 ಖಾಸಗಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ಪ್ರಸ್ತುತ ಸರ್ಕಾರಿ ಶಾಲೆ ಬಡ ವಿದ್ಯಾರ್ಥಿ ಗಳಿಗೆ ಸೀಮಿತವಾಗಿದೆ. ಅವರ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು. ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಮುಖಂಡರಾದ ನಾಗೇಂದ್ರ, ನಾಗ ರಾಜು, ಆರ್‌. ಮಹದೇಶ್‌ ಉಪ್ಪಾರ್‌ ಹಾಜರಿದ್ದರು.

ರಾಜಕೀಯ ಲಾಭಕ್ಕಾಗಿ ದಲಿತರ ಮನೆಗೆ
ಚಾಮರಾಜನಗರ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ದಲಿತರ ಮನೆಗಳಿಗೆ ಭೇಟಿ ನೀಡಿ ಉಪಹಾರ ಸೇವನೆ ಮಾಡುತ್ತಿರುವುದು ಕೇವಲ ರಾಜಕೀಯ ಲಾಭಕ್ಕಾಗಿ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌. ಮಹೇಶ್‌ ಟೀಕಿಸಿದರು.

ಯಡಿಯೂರಪ್ಪ ಅವರು ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ಅವರು ದಲಿತರ ಮನೆಗೆ ಹೋಗುತ್ತಿದ್ದಾರೆ. ಇದರಿಂದ ಅಸ್ಪೃಶ್ಯತೆ ನಾಶವಾಗುತ್ತದೆ. ದಲಿತರ ಮತ ಪಡೆಯಬಹುದು ಎಂದು ಅವರು ತಿಳಿದಿದ್ದರೆ ಅದು ಅವರ ಭ್ರಮೆ ಮಾತ್ರ ಎಂದು ಹೇಳಿದರು.

ಯಡಿಯೂರಪ್ಪ ಅವರು ದಲಿತರ ಮನೆಯಲ್ಲಿ ಊಟ ಮಾಡುತ್ತೇನೆ ಎಂದು ಹೇಳುವ ಮೂಲಕವೇ ಅಸ್ಪೃಶ್ಯತೆ ಇದೆ ಎಂಬುದನ್ನು ತೋರಿಸುತ್ತಿದ್ದಾರೆ. ಈ ಬಗ್ಗೆ ದಲಿತರು ಆಲೋಚಿಸಬೇಕು ಎಂದು ಅವರು ತಿಳಿಸಿದರು.

* * 

ಸರ್ಕಾರಿ ಶಾಲೆಯಲ್ಲಿ ಓದುವ ಎಲ್ಲ ವಿದ್ಯಾರ್ಥಿಗಳು ಬಡವರಾಗಿದ್ದಾರೆ. ಅವರಲ್ಲಿ ತಾರತಮ್ಯ ಬೇಡ. ಸೌಲಭ್ಯ ವನ್ನು ಸಮಾನವಾಗಿ ಹಂಚಬೇಕು
ಎನ್.ಮಹೇಶ್‌
ಬಿಎಸ್‌ಪಿ ರಾಜ್ಯ ಘಟಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.