ADVERTISEMENT

ಕನಕಗಿರಿಗೆ ಪ್ರಾಚೀನ ಸ್ಮಾರಕದ ಸ್ಥಾನಮಾನ

ಶೀಘ್ರ ಘೋಷಣೆಗೆ ಕ್ರಮ: ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 8:52 IST
Last Updated 13 ಜುಲೈ 2013, 8:52 IST
ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದ ನಂದಿಕೇಶ್ವರ ಗವಿಮಠದ ಬಳಿ ಶುಕ್ರವಾರ ಧಾರ್ಮಿಕ ಸಭೆ ನಡೆಯಿತು. ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ, ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ, ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಆರ್. ಗೋಪಾಲ್ ಹಾಜರಿದ್ದರು.
ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದ ನಂದಿಕೇಶ್ವರ ಗವಿಮಠದ ಬಳಿ ಶುಕ್ರವಾರ ಧಾರ್ಮಿಕ ಸಭೆ ನಡೆಯಿತು. ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ, ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ, ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಆರ್. ಗೋಪಾಲ್ ಹಾಜರಿದ್ದರು.   

ಚಾಮರಾಜನಗರ: `ಸಾವಿರಾರು ವರ್ಷಗಳ ಇತಿಹಾಸವಿರುವ ಮಲೆಯೂರು ಕನಕಗಿರಿ ಪಾರ್ಶ್ವನಾಥ ಜೈನ ಬಸದಿಯನ್ನು ಪ್ರಾಚ್ಯವಸ್ತು ಇಲಾಖೆ ಮೂಲಕ ಶೀಘ್ರವೇ ಪ್ರಾಚೀನ ಸ್ಮಾರಕವೆಂದು ಘೋಷಿಸಲಾಗುವುದು. ಆ ಮೂಲಕ ಬೆಟ್ಟದ 2 ಕಿ.ಮೀ. ವ್ಯಾಪ್ತಿ ಗಣಿಗಾರಿಕೆ ಚಟುವಟಿಕೆ ನಡೆಯದಂತೆ ನಿಯಂತ್ರಣ ಹೇರಲಾಗುವುದು' ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಹೇಳಿದರು.

ತಾಲ್ಲೂಕಿನ ಮಲೆಯೂರು ಗ್ರಾಮದ ಮೂರು ನಂದಿಕೇಶ್ವರ ಗವಿಮಠದ ಬಳಿ ಶುಕ್ರವಾರ ಲಿಂ.ಬಸವರಾಧ್ಯ ಸ್ವಾಮೀಜಿ ಸ್ಮರಣಾರ್ಥ ಕನಕಗಿರಿ ಪಂಚಮುಖಿ ಬೆಟ್ಟ ಸಂರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಧಾರ್ಮಿಕ ಮತ್ತು ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಚಾಮರಾಜನಗರವನ್ನು ಕೇಂದ್ರವಾಗಿಟ್ಟುಕೊಂಡು ಬಿಳಿಗಿರಿರಂಗನಬೆಟ್ಟ, ಕನಕಗಿರಿ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಹಬ್‌ಟೂರ್ ಏರ್ಪಡಿಸುವ ಆಲೋಚನೆ ಇದೆ ಎಂದರು.

ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸಿ ಉದ್ಯೋಗ ಸೃಷ್ಟಿಗೆ ಕ್ರಮವಹಿಸಲಾಗುವುದು. ಈಗ ಎಲ್ಲವೂ ವ್ಯಾಪಾರೀಕರಣವಾಗಿದೆ. ಹೀಗಾಗಿ, ಪ್ರಾಕೃತಿಕ ಸಂಪತ್ತಿನ ಲೂಟಿ ನಡೆಯುತ್ತಿದೆ ಎಂದು ವಿಷಾದಿಸಿದರು.

ಮೈಸೂರು ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕ ಆರ್. ಗೋಪಾಲ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಾಚೀನ ಇತಿಹಾಸವಿರುವ ಸ್ಥಳಗಳನ್ನು ಸ್ಮಾರಕಗಳೆಂದು ಪರಿಗಣಿಸಬಹುದು. ಜಿಲ್ಲಾಧಿಕಾರಿ ಅವರು ಎಲ್ಲ ಪೂರಕ ದಾಖಲೆ ಒದಗಿಸಿಕೊಡಲು ತಿಳಿಸಿದರೆ ನಾವು ಮುಂದಿನ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಕನಕಗಿರಿ ಕ್ಷೇತ್ರವನ್ನು ಪ್ರಾಚೀನ ಸ್ಮಾರಕವೆಂದು ಘೋಷಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ ಮಾತನಾಡಿ, ಗವಿ ಮಠದ ಸುತ್ತಲಿನ 2 ಕಿ.ಮೀ. ಪ್ರದೇಶದ ಉಸ್ತುವಾರಿಯನ್ನು ಮಠಕ್ಕೆ ನೀಡಲು ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಈಗಲೂ ವಿವಿಧೆಡೆ ಬಸದಿಗಳಿವೆ. ಕನಕಗಿರಿ ಅತ್ಯಂತ ಪುರಾತನ ಜೈನ ಕ್ಷೇತ್ರ. ಇಲ್ಲಿದ್ದ ಪೂಜ್ಯರು ವ್ಯಾಕರಣ, ಆಯುರ್ವೇದ ಇತ್ಯಾದಿ ಗ್ರಂಥ ರಚಿಸಿದ್ದರು.

ಇಲ್ಲಿನ ಅರ್ಚಕ ದೇವಚಂದ್ರ ಬ್ರಿಟಿಷರ ಕರ್ನಲ್ ಮೆಕೆಂಜೆಯಿಂದ ಶಹಬ್ಬಾಸ್‌ಗಿರಿ ಪಡೆದಿದ್ದ. ಆತ ರಚಿಸಿದ ರಾಜಾವಳಿ ಕಥೆ ಹಲವು ಐತಿಹಾಸಿಕ ಘಟನೆ ಒಳಗೊಂಡಿದೆ. ಹೀಗಾಗಿ, ಕನಕಗಿರಿ ಬೆಟ್ಟದಲ್ಲಿ ಪ್ರಕೃತಿ ನಾಶವಾಗದಂತೆ ಕಾಪಾಡುವುದು ಎಲ್ಲರ ಹೊಣೆ ಎಂದು ಹೇಳಿದರು.

ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ  ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಾಗುವುದು. ಕನಕಗಿರಿ ಬೆಟ್ಟದಲ್ಲಿ ಶಾಸನಗಳು, ಗವಿಗಳು, ಶ್ರದ್ಧಾಭಕ್ತಿಯ ಕೇಂದ್ರಗಳಿವೆ. ಯಾವುದೂ ಹಾಳಾಗದಂತೆ ಕಾಪಾಡುವುದು ಎಲ್ಲರ ಹೊಣೆ ಎಂದರು.

ಕಾರ್ಯಕ್ರಮದಲ್ಲಿ ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಡಿ. ಸಿಲ್ವ, ಕನಕಗಿರಿ ಪಂಚಮುಖಿ ಬೆಟ್ಟ ಸಂರಕ್ಷಣಾ ಸಮಿತಿ ಸಂಚಾಲಕ ಎಂ.ಎಲ್. ರೇವಣ್ಣ, ಗೌಡಿಕೆ ಸೋಮಣ್ಣ, ಎಲ್. ನಾಗಣ್ಣ, ಪುಟ್ಟಬುದ್ಧಿ, ಮೂಡ್ನಾಕೂಡು ನಾಗೇಂದ್ರಪ್ರಸಾದ್, ರವಿಶಂಕರ್, ಪ್ರಭುಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.