ADVERTISEMENT

ಚಾಮರಾಜೇಶ್ವರ ದೇಗುಲ ಜೀರ್ಣೋದ್ಧಾರ ನೆನೆಗುದಿಗೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 9:15 IST
Last Updated 18 ಜೂನ್ 2012, 9:15 IST

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ಚಾಮರಾಜೇಶ್ವರಸ್ವಾಮಿ ರಥೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಆದರೆ, ದೇಗುಲದ ಜೀರ್ಣೋದ್ಧಾರ ಕಾರ್ಯ ಮಾತ್ರ ನೆನೆಗುದಿಗೆ ಬಿದ್ದಿದೆ.

ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಆಷಾಢ ಮಾಸದಲ್ಲಿ ನಡೆಯುವ ಈ ರಥೋತ್ಸವ ನಾಡಿನಲ್ಲಿಯೇ ಪ್ರಸಿದ್ಧಿ ಪಡೆದಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ರಥಕ್ಕೆ ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸುವುದು ರಥೋತ್ಸವದ ವಿಶೇಷ. ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಾರೆ.

ಆದರೆ, ಹೊಸ ರಥ ನಿರ್ಮಿಸಬೇಕೆಂಬ ಭಕ್ತರ ಒತ್ತಾಯಕ್ಕೆ ರಾಜ್ಯ ಸರ್ಕಾರ ಕಿವಿಗೊಟ್ಟಿಲ್ಲ. ರಥೋತ್ಸವಕ್ಕೂ ಮೊದಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಥದ ಚಕ್ರಗಳನ್ನು ಪರಿಶೀಲನೆ ನಡೆಸುತ್ತಾರೆ. ಜು. 4ರಂದು ನಡೆಯುವ ರಥೋತ್ಸವಕ್ಕೂ ಮೊದಲು ಚಕ್ರಗಳ ಪರಿಶೀಲನೆ ನಡೆಸಲಾಗಿದೆ. ಇವುಗಳು ಶಿಥಿಲಗೊಂಡಿದ್ದು, ರಥೋತ್ಸವಕ್ಕೆ ಅನುಕೂಲಕರವಾಗಿಲ್ಲ ಎಂಬ ವರದಿ ಕೂಡ ನೀಡಿದ್ದಾರೆ. ಪ್ರತಿವರ್ಷವೂ ಈ ಸಿದ್ಧ ವರದಿ ನೀಡುವುದು ಮುಂದು ವರಿದಿದೆ. ಆದರೆ, ಹೊಸ ರಥ ನಿರ್ಮಿಸುವ ಪ್ರಯತ್ನ ಮಾತ್ರ ನಡೆದಿಲ್ಲ ಎಂಬುದು ಭಕ್ತರ ಅಳಲು.

ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ, ಸಚಿವರು ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೌಢ್ಯವೂ ಬೇರುಬಿಟ್ಟಿದೆ. ಈ ಹಿನ್ನೆಲೆಯಲ್ಲಿ ದೇವಾಲಯದೊಳಗೆ ಅಷ್ಟಮಂಗಳ ಪ್ರಶ್ನೆ ನಡೆಸಿ ಹೋಮಹವನ ಕೂಡ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಲಕ್ಷಾಂತರ ರೂ ವೆಚ್ಚ ಮಾಡಲಾಗಿತ್ತು. ಆ ಹಣವನ್ನು ಕನಿಷ್ಠ ಹೊಸ ರಥ ನಿರ್ಮಾಣಕ್ಕೆ ನೀಡಿದ್ದರೆ ಸಾರ್ಥಕವಾಗುತ್ತಿತ್ತು ಎಂಬ ಭಕ್ತರ ಆಶಯ ಈಡೇರಲಿಲ್ಲ.

5 ಕೋಟಿ ರೂಪಾಯಿ ಪ್ರಸ್ತಾವ

ದೇವಾಲಯ ಸಂಪೂರ್ಣ ಶಿಥಿಲಗೊಂಡಿದೆ. ಹೀಗಾಗಿ, ಜೀರ್ಣೋದ್ಧಾರಕ್ಕೆ ಕನಿಷ್ಠ 5 ಕೋಟಿ ರೂ ಅನುದಾನ ನೀಡುವಂತೆ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಇಂದಿಗೂ ಅನುದಾನ ಮಾತ್ರ ಮಂಜೂರಾಗಿಲ್ಲ.

ಹೀಗಾಗಿ, ಬಿರುಕುಬಿಟ್ಟಿರುವ ಗೋಡೆಗಳು ಅಪಾಯ ಆಹ್ವಾನಿಸುತ್ತಿವೆ. ಭಾರೀ ಗಾಳಿ-ಮಳೆ ಸುರಿದರೆ ದೇಗುಲಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದು ಭಕ್ತರ ಆತಂಕ.

ದೇಗುಲದ ಮುಂಭಾಗದಲ್ಲಿರುವ ಉದ್ಯಾನ ಕೂಡ ಪಾಳುಬಿದ್ದಿದೆ. ನಗರಸಭೆ ಆಡಳಿತ ಈ ಉದ್ಯಾನದ ನಿರ್ವಹಣೆಗೆ ಹಿಂದೇಟು ಹಾಕಿದೆ. ದೇಗುಲದ ಮುಂಭಾಗದಲ್ಲಿ ಹೂತು ಹೋಗಿರುವ ಪುಷ್ಕರಿಣಿಯ ಉತ್ಖನನಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ತೋರಿದ್ದ ಆಸಕ್ತಿಗೆ ಪರ-ವಿರೋಧದ ಕೂಗು ಕೇಳಿಬಂದಿತ್ತು.

ಸದ್ಯಕ್ಕೆ ಉತ್ಖನನ ಕಾರ್ಯದ ಮಾತು ಕೇಳಿಬರುತ್ತಿಲ್ಲ. ಆದರೆ, ಉದ್ಯಾನ ಮಾತ್ರ ಗೋಳಿನ ಕಥೆ ಹೇಳುತ್ತಿದೆ. ಬಿಡಾಡಿ ದನಗಳು, ಮೇಕೆಗಳು ಉದ್ಯಾನದೊಳಕ್ಕೆ ಲಗ್ಗೆ ಇಟ್ಟು ವಿಶ್ರಮಿಸಿಕೊಳ್ಳುತ್ತಿವೆ. ರಜಾದಿನಗಳಂದು ವಿದ್ಯಾರ್ಥಿಗಳಿಗೆ ಕ್ರಿಕೆಟ್ ಆಟದ ಮೈದಾನವಾಗಿ ಉದ್ಯಾನ ಮಾರ್ಪಟ್ಟಿದೆ.

`ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ದಿಂದಲೇ ಸರ್ಕಾರ ಹಾಗೂ ಸಂಘ-ಸಂಸ್ಥೆಗಳ ಕಾರ್ಯ ಕ್ರಮಗಳು ಆರಂಭಗೊಳ್ಳುತ್ತಿವೆ. ಆದರೆ, ದೇಗುಲ ಹಾಗೂ ರಥದ ಚಕ್ರಗಳು ಶಿಥಿಲಗೊಂಡಿರುವ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ.

ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ದೇಗುಲ ಸಂಪೂರ್ಣ ಶಿಥಿಲಗೊಂಡಿದೆ. ಈಗಲಾದರೂ, ಸರ್ಕಾರ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆಗೊಳಿಸಬೇಕು~ ಎಂದು ಒತ್ತಾಯಿಸುತ್ತಾರೆ ಭಕ್ತರಾದ ಹರೀಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.