ಕೊಳ್ಳೇಗಾಲ: ತಂದೆಯಿಂದಲೇ ಮಗ ಕೊಲೆಗೀಡಾದ ಘಟನೆ ತಾಲ್ಲೂಕಿನ ಮುಳ್ಳೂರು ಗ್ರಾಮದಿಂದ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಗಿರೀಶ(29) ಕೊಲೆಯಾದವರು. ಬಸವರಾಜಪ್ಪ ಎಂಬಾತನೇ ಮಗನನ್ನು ಕೊಲೆ ಮಾಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಫೆ.14ರಂದು ಬೆಳಿಗ್ಗೆ ಜಮೀನಿನ ಪಂಪ್‌ಸೆಟ್‌ನಲ್ಲಿ ಆರೋಪಿ ಪುತ್ರ ಮುಳ್ಳೂರುಗ್ರಾಮದ ಗಿರೀಶ ನನ್ನು (29) ಕೊಲೆ ಮಾಡಲಾಗಿತ್ತು.
ಗಿರೀಶನ ಸಾವು ಕೊಲೆಯಾಗಿದ್ದು ಈ ಬಗ್ಗೆ ಮನೆಯವರು ನೀಡಿದ ದೂರಿನ ಮೇರೆ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದು ವರೆಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಈ ಕೊಲೆಗಾರನನ್ನು ಪತ್ತೆ ಹಚ್ಚುವಂತೆ ರೈತ ಸಂಘದವರೂ ಸಹ ಪೊಲೀಸರ ಮೇಲೆ ಒತ್ತಡ ಹೇರಿದ್ದರು.
ಗ್ರಾಮಾಂತರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ತಂದೆಯೇ ಮಗನನ್ನು ಕೊಲೆ ಮಾಡಿದ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತನು ಕುಡುಕನಾಗಿದ್ದು ಪಾನಮತ್ತನಾಗಿ ಆಸ್ತಿ ಭಾಗ ಕೊಡುವಂತೆ ಪದೇ ಪದೇ ತಂದೆಯನ್ನು ಪೀಡಿಸಿ ಕಿರುಕುಳ ನೀಡುತ್ತಿದ್ದ. ಅಲ್ಲದೆ ಕೊಲೆ ಆರೋಪಿಗೆ ಹೆಣ್ಣುಮಗಳ ಮೇಲೆ ಮಮತೆ ಹೆಚ್ಚಾಗಿದ್ದು, ಹೆಣ್ಣುಮಗಳಿಗೆ ನೀಡಲು ಮುಂದಾಗಿದ್ದ ಎನ್ನಲಾಗಿದೆ. ಆಸ್ತಿ ಭಾಗದ ವಿಚಾರದಲ್ಲಿ ತಾನೇ ಮಗನನ್ನು ಕೊಂದುದಾಗಿ ಆರೋಪಿ ಒಪ್ಪಿಕೊಂಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.