ADVERTISEMENT

ತಂಬಾಕುಮುಕ್ತ ಸಮಾಜ ಕಟ್ಟಲು ಕರೆ

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ. ಬಸವರಾಜ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:26 IST
Last Updated 1 ಜೂನ್ 2018, 12:26 IST

ಚಾಮರಾಜನಗರ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧಿಸುವ ಕಾನೂನು ನಮ್ಮ ದೇಶದಲ್ಲಿ 2003ರಿಂದ ಜಾರಿಯಲ್ಲಿದ್ದರೂ ತಂಬಾಕುಮುಕ್ತ ಸಮಾಜ ನಿರ್ಮಾಣವಾಗಿಲ್ಲ. ಹೀಗಾಗಿ, ಕಾನೂನಿಗಿಂತ ಸ್ವಯಂ ನಿರ್ಬಂಧವೇ ಹೆಚ್ಚು ಪರಿಣಾಮಕಾರಿ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಜಿ.ಬಸವರಾಜ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನವು ‌ಪ್ರತಿ ಪ್ರಜೆಗೂ ಗೌರವಯುತವಾಗಿ ಜೀವಿಸುವ ಮೂಲಭೂತ ಹಕ್ಕನ್ನು ನೀಡಿದೆ. ಯಾವುದೇ ನಾಗರಿಕರು ಜೀವಿಸುವ ಪರಿಸರಕ್ಕೆ ಹಾನಿಯಾಗದಂತೆ, ಮಲಿನಗೊಳ್ಳದಂತೆ ಕಾಯ್ದುಕೊಳ್ಳಬೇಕು. ಆದರೆ, ತಂಬಾಕು ಸೇವನೆ ಮಾಡುವ ಜನರಿಂದ ಇತರರ ಜೀವಿಸುವ ಮೂಲಭೂತ ಹಕ್ಕಿಗೆ, ಪರಿಸರಕ್ಕೆ ತೊಂದರೆಯಾಗುತ್ತದೆ. ಅದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಸಂದರ್ಭದಲ್ಲಿ ಧೂಮಪಾನ ಮಾಡಿದವರ ವಿರುದ್ಧ ದೂರು ಕೊಡಬಹುದು’ ಎಂದು ಅವರು ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ‘ಮನುಷ್ಯನಿಗೆ ತನ್ನ ಆರೋಗ್ಯ ಹಾಗೂ ದೇಹದ ಮೇಲೆ ಪ್ರೀತಿ ಇರಬೇಕು. ತಮ್ಮ ಮನಸ್ಸನ್ನು ತಂಬಾಕು ಸೇವನೆಯಂತಹ ವ್ಯಸನಗಳಿಂದ ದೂರ ಮಾಡಲು ಪ್ರೇರೇಪಿಸಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ತಂಬಾಕು ನಿಯಂತ್ರಣ ಘಟಕದ ನೋಡಲ್ ಅಧಿಕಾರಿ ಡಾ.ನಾಗರಾಜ್ ಅವರು ತಂಬಾಕಿನ ದುಷ್ಪರಿಣಾಮಗಳ ಕುರಿತು ಮಾತನಾಡಿದರು.

ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಆರ್‌ಸಿಎಚ್ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜು ಹಾಜರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ನ್ಯಾಯಾಲಯದ ಆವರಣದಿಂದ ಜಿಲ್ಲಾಡಳಿತದ ಭವನದವರೆಗೆ ನರ್ಸಿಂಗ್ ವಿದ್ಯಾಲಯದ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ತಂಬಾಕು ವಿರೋಧಿ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಜಾಥಾ ನಡೆಸಿದರು.

ತಂಬಾಕಿನ ದುಷ್ಪರಿಣಾಮಗಳು

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ತಂಬಾಕು ನಿಯಂತ್ರಣ ಘಟಕದ ನೋಡಲ್ ಅಧಿಕಾರಿ ಡಾ.ನಾಗರಾಜ್ ಅವರು ತಂಬಾಕಿನ ದುಷ್ಪರಿಣಾಮಗಳನ್ನು ಕುರಿತು ಮಾತನಾಡಿದರು.

ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಹಲವು ರೋಗಗಳು ಬರುತ್ತವೆ. ಹೃದಯ, ಉಸಿರಾಟ, ರಕ್ತಚಲನೆಯ ತೊಂದರೆಗಳೂ ಸೇರಿದಂತೆ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುತ್ತವೆ ಎಂದರು.

ಬಾಯಿ, ಅನ್ನನಾಳ, ಶ್ವಾಸಕೋಶ, ಲಿವರ್, ಪ್ಯಾಂಕ್ರಿಯಾಸ್‌ಗಳ ಕ್ಯಾನ್ಸರ್‌ಗಳು ಈ ದುಶ್ಚಟದಿಂದ ಬರುತ್ತವೆ. ಧೂಮಪಾನದಿಂದ ಪುರುಷರಲ್ಲಿ ನಪುಂಸಕತ್ವ ಸೇರಿದಂತೆ ಮಹಿಳೆಯರಲ್ಲಿ ಗರ್ಭಪಾತದಂತಹ ಮಾರಕ ಪರಿಣಾಮಗಳು ಉಂಟಾಗುತ್ತವೆ ಎಂದು ಎಚ್ಚರಿಸಿದರು.

**
ಯುವಜನತೆ ತೆರೆಯ ಮೇಲಿನ ನಟ–ನಟಿಯರ ಶೈಲಿಗಳನ್ನು ಕಣ್ಣುಮುಚ್ಚಿ ಅನುಸರಿಸುತ್ತಾರೆ. ಸಿಗರೇಟು ಸೇದುವುದು, ಮದ್ಯವ್ಯಸನಗಳಿಗೆ ತುತ್ತಾಗುತ್ತಿದ್ದಾರೆ
ಎಂ.ರಮೇಶ್, ಹಿರಿಯ ಸಿವಿಲ್ ನ್ಯಾಯಾಧೀಶ
**

ತಂಬಾಕು ಬೆಳೆಯ ಮೇಲೆ ಈಗ ಸರ್ಕಾರ ನಿರ್ಬಂಧ ಹೇರಿ ಪರ್ಯಾಯ ಬೆಳೆಯನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದೆ. ಬೆಳೆಗಾರರು ಇದರತ್ತ ಗಮನ ಹರಿಸಬೇಕು
– ಡಾ.ಕೆ.ಎಚ್.ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.