ADVERTISEMENT

ತಮಿಳುನಾಡಿಗೆ ಟೆಂಪೋ ಸಂಚಾರ ಬಂದ್

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 8:50 IST
Last Updated 21 ಜೂನ್ 2011, 8:50 IST

ಚಾಮರಾಜನಗರ: ಜಿಲ್ಲೆಯಿಂದ ತಮಿಳುನಾಡಿಗೆ ತರಕಾರಿ ಸೇರಿದಂತೆ ಇತರೇ ಪದಾರ್ಥ ಕೊಂಡೊಯ್ಯುವ ವೇಳೆ ಅನಗತ್ಯವಾಗಿ ಅಲ್ಲಿನ ಸಾರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಸೋಮವಾರ ಟಿಪ್ಪು ಟೆಂಪೋ ಚಾಲಕರ ಸಂಘದಿಂದ ಪ್ರತಿಭಟನೆ ನಡೆಯಿತು.

ಪ್ರತಿನಿತ್ಯವೂ ತಮಿಳುನಾಡಿಗೆ 50ಕ್ಕೂ ಹೆಚ್ಚು ಟೆಂಪೋಗಳಲ್ಲಿ ತರಕಾರಿ ಸೇರಿದಂತೆ ಇತರೇ ವಸ್ತುಗಳು ಪೂರೈಕೆಯಾಗುತ್ತಿವೆ. ಆದರೆ, ಅಲ್ಲಿನ ಆರ್‌ಟಿಒಗಳು ಹೆಚ್ಚುವರಿ ಸರಕು ಸಾಗಿಸಲಾಗುತ್ತಿದೆಯೆಂದು ದಂಡ ವಿಧಿಸುತ್ತಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ವಾಹನ ಸಂಚಾರ ಬಂದ್ ಮಾಡಿದರು.

ವಾಹನ ವಶಕ್ಕೆ ಪಡೆದು ಪ್ರತಿ ಟನ್‌ವೊಂದಕ್ಕೆ 5 ಸಾವಿರ ರೂ ದಂಡ ವಿಧಿಸುತ್ತಿದ್ದಾರೆ. ಇದರಿಂದ ಟೆಂಪೋ ಮಾಲೀಕರು ಹಾಗೂ ಚಾಲಕರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಋತುಮಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಮಿಳುನಾಡಿಗೆ ತರಕಾರಿ ಪೂರೈಕೆಯಾಗುತ್ತದೆ. ನಿತ್ಯವೂ 25ರಿಂದ 30 ಲಕ್ಷ ರೂ ವಹಿವಾಟು ನಡೆಯುತ್ತದೆ. ಆದರೆ, ಅಲ್ಲಿನ ಅಧಿಕಾರಿಗಳ ಕಿರುಕುಳದಿಂದ ನಷ್ಟ ಅನುಭವಿಸುವಂತಾಗಿದೆ. ಕೊಳ್ಳೇಗಾಲ, ಚಾ.ನಗರ ಮತ್ತು ಗುಂಡ್ಲುಪೇಟೆಯಿಂದ ಪೂರೈಕೆಯಾಗುವ ತರಕಾರಿಗೆ ತಮಿಳುನಾಡಿನಲ್ಲಿ ಬೇಡಿಕೆ ಹೆಚ್ಚಿದೆ. ಆದರೆ, ಜಿಲ್ಲೆಯ ರೈತರು ಬೆಳೆದ ತರಕಾರಿ ಸಾಗಿಸಲು ತೊಂದರೆಯಾಗಿದೆ ಎಂದು ದೂರಿದರು.

ಕೂಡಲೇ, ಮಾಲೀಕರು ಹಾಗೂ ಚಾಲಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಸೌಹಾರ್ದವಾಗಿ ವರ್ತಿಸುವಂತೆ ತಿಳಿಹೇಳಬೇಕು. ಇಲ್ಲವಾದಲ್ಲಿ ಸಂಪೂರ್ಣವಾಗಿ ತರಕಾರಿ ಸಾಗಾಟವನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸಮೀಉಲ್ಲಾ ಖಾನ್, ಕುನೂರ್, ಮಹೇಶ್, ವೆಂಕಟರಾವ್, ಇರ್ಷಾದ್‌ಉಲ್ಲಾ ಖಾನ್, ಮೂರ್ತಿ, ಗದ್ದಿಖ್ ಪಾಷಾ ಇತರರು ಪಾಲ್ಗೊಂಡಿದ್ದರು.

ಕೊನೆಗೂ ಸಂಧಾನ ಯಶಸ್ವಿ

ಚಾಮರಾಜನಗರ: ಟೆಂಪೋ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಚಾಲಕರು ಹಾಗೂ ತಮಿಳುನಾಡಿನ ಸಾರಿಗೆ ಅಧಿಕಾರಿಗಳೊಂದಿಗೆ ಜಿಲ್ಲೆಯ ಪೊಲೀಸರು ಗಡಿ ಭಾಗದ ಹಸನೂರಿನಲ್ಲಿ ನಡೆಸಿದ ಸಂಧಾನ ಸಭೆ ಯಶಸ್ವಿಯಾಯಿತು.

ಡಿವೈಎಸ್‌ಪಿ ಸಿ. ಬಸವರಾಜು ನೇತೃತ್ವದಲ್ಲಿ ಸಭೆ ನಡೆಯಿತು. ತಮಿಳುನಾಡಿನ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಟೆಂಪೋಗಳಲ್ಲಿ ನಿಗದಿತ ಸಾಮರ್ಥ್ಯದಲ್ಲಿ ತರಕಾರಿ ಪೂರೈಕೆ ಮಾಡುತ್ತಿದ್ದರೂ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಚಾಲಕರು ಸಭೆಯ ಗಮನ ಸೆಳೆದರು.

`ಸಾಮರ್ಥ್ಯಕ್ಕೆ ಅನುಗುಣವಾಗಿ ತರಕಾರಿ ಸೇರಿದಂತೆ ಇತರೇ ಪದಾರ್ಥ ಪೂರೈಸುವ ವಾಹನಗಳಿಗೆ ಯಾವುದೇ ದಂಡ ವಿಧಿಸುವುದಿಲ್ಲ. ಜತೆಗೆ, ಚಾಲಕರಿಗೆ ಕಿರುಕುಳ ನೀಡುವುದಿಲ್ಲವೆಂದು ತಮಿಳುನಾಡಿನ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂದಕ್ಕೆ ಪಡೆಯಲಾಗಿದೆ~ ಎಂದು ಸಂಘದ ಅಧ್ಯಕ್ಷ ಸಮೀಉಲ್ಲಾ ಖಾನ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.