ADVERTISEMENT

ತಮಿಳುನಾಡು ಸರ್ಕಾರದ ಪಿಂಡದಾನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:25 IST
Last Updated 8 ಅಕ್ಟೋಬರ್ 2012, 8:25 IST
ತಮಿಳುನಾಡು ಸರ್ಕಾರದ ಪಿಂಡದಾನ
ತಮಿಳುನಾಡು ಸರ್ಕಾರದ ಪಿಂಡದಾನ   

ಚಾಮರಾಜನಗರ: ತೀವ್ರವಾದ ಚಳಿವಳಿಯ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ತಾಲ್ಲೂಕಿನ ಗಡಿಭಾಗವಾದ ಪುಣಜನೂರು ಚೆಕ್‌ಪೋಸ್ಟ್ ಹತ್ತಿರ ಭಾನುವಾರ ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದಿಂದ ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರದ ಅಣುಕು ತಿಥಿ ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ಹೆದ್ದಾರಿ- 209ರಲ್ಲಿಯೇ ಕುಳಿತ ಒಕ್ಕೂಟದ ಕಾರ್ಯಕರ್ತರು ಪಿಂಡದಾನ ಮಾಡಿ ಸಾಮೂಹಿಕ ಭೋಜನ ಸೇವಿಸಿದರು. ಪ್ರಧಾನಿ ಡಾ.ಮನಮೋಹನ ಸಿಂಗ್, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರವನ್ನು ಮುಂದಿಟ್ಟುಕೊಂಡು ಪಿಂಡದಾನ ಮಾಡಿದರು. ಪುರೋಹಿತರು ವಿಧಿವಿಧಾನ ನೆರವೇರಿಸಿದ ನಂತರ ಈ ಮೂವರು ನಾಯಕರು ನರಕಕ್ಕೆ ಹೋಗಲಿ ಎಂದು ಘೋಷಣೆ ಕೂಗಿದರು.

ಹೆದ್ದಾರಿಯಲ್ಲಿಯೇ ಈ ತಿಥಿ ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಸಂಚಾರ ಬಂದ್ ಆಗಿತ್ತು. ಬಸ್, ಲಾರಿಗಳು ಸೇರಿದಂತೆ ಇತರೇ ವಾಹನಗಳು ರಸ್ತೆಬದಿಯಲ್ಲಿಯೇ ನಿಲ್ಲುವಂತಾಯಿತು. ಕಾರ್ಯಕರ್ತರಿಂದ ನಡೆದ ಈ ತಿಥಿ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಕೂಡ ಬೆಂಬಲ ಘೋಷಿಸಿ ಪಾಲ್ಗೊಂಡಿದ್ದರು.

ಒಕ್ಕೂಟದ ಅಧ್ಯಕ್ಷ ಶಾ. ಮುರುಳಿ ಮಾತನಾಡಿ, ಕೇಂದ್ರ ಸರ್ಕಾರ ತಮಿಳುನಾಡಿನ ಗುಲಾಮನಂತೆ ವರ್ತಿಸುತ್ತಿದೆ. ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ. ಹೀಗಾಗಿ, ಈ ಮೂರು ಸರ್ಕಾರಗಳು ಕನ್ನಡಿಗರ ವಿರೋಧಿಯಾಗಿದ್ದು, ನಮ್ಮ ಪಾಲಿಗೆ ಸತ್ತಿವೆ. ಈ ಹಿನ್ನೆಲೆಯಲ್ಲಿ ತಿಥಿ ಕಾರ್ಯಕ್ರಮ ನಡೆಸಲಾಗಿದೆ. ಹೋರಾಟ ಮುಂದುವರಿಸಿದರೂ ನೀರು ಬಿಡಲಾಗುತ್ತಿದೆ ಎಂದು ದೂರಿದರು.

ರಾಜ್ಯ ಸರ್ಕಾರ ಹೇಡಿತನ ಪ್ರದರ್ಶಿಸುತ್ತಿದೆ. ಜನರ ಹಿತಾಸಕ್ತಿ ಕಾಪಾಡಲು ನಿರ್ಲಕ್ಷ್ಯವಹಿಸಿದೆ. ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತುಹೋಗಿವೆ. ಕೂಡಲೇ, ಮುಖ್ಯಮಂತ್ರಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಚಾ.ವೆಂ. ರಾಜಗೋಪಾಲ್, ಗು. ಪುರುಷೋತ್ತಮ್, ಚಾ.ಗು. ನಾಗರಾಜು, ಹ.ವಿ. ನಟರಾಜು, ಸಿ.ಸಿ. ಪ್ರಕಾಶ್, ಗೋವಿಂದರಾಜ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.