ADVERTISEMENT

ಪುರುಷರ ಪಾರುಪತ್ಯ: ಸ್ತ್ರೀಯರಿಗೆ ಅಪಥ್ಯ

ಜಿಲ್ಲೆಯಿಂದ 13 ಚುನಾವಣೆಗೆ ಸ್ಪರ್ಧಿಸಿರುವ ಮಹಿಳೆಯರ ಸಂಖ್ಯೆ 11, ಮೂವರಿಗೆ ಮಾತ್ರ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 9:15 IST
Last Updated 22 ಮಾರ್ಚ್ 2014, 9:15 IST

ಚಾಮರಾಜನಗರ: ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಪುರುಷರೇ ಪ್ರಾಬಲ್ಯ ಮೆರೆಯುತ್ತಿದ್ದು, ಮಹಿಳೆಯರು ಮೂಲೆಗೆ ಸರಿಯುವಂತಾಗಿದೆ.
ಸಂಚಿ ಹೊನ್ನಮ್ಮನಂತಹ ದಿಟ್ಟಮಹಿಳೆ ಜನಿಸಿದ ಗಡಿ ಜಿಲ್ಲೆಯಲ್ಲಿ ಸ್ತ್ರೀಯರು ರಾಜಕೀಯವಾಗಿ ಬೆಳೆಯಲು ಪುರುಷರು ಅಡ್ಡಗೋಡೆಯಾಗಿದ್ದಾರೆ. ದಿ.ಕೆ.ಎಸ್. ನಾಗರತ್ನಮ್ಮ ಅವರನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ರಾಜಕೀಯವಾಗಿ ಅತ್ಯುನ್ನತ ಸ್ಥಾನಕ್ಕೇರಿದ ಮಹಿಳೆಯರ ಸಂಖ್ಯೆ ಅತಿವಿರಳ.

ರಾಜಕೀಯ ಪಕ್ಷಗಳು ಕೂಡ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವಲ್ಲಿ ಹಿಂದೇಟು ಹಾಕಿವೆ. ಪ್ರಸ್ತುತ ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲೂ ಈ ಪರಿಸ್ಥಿತಿ ಮುಂದುವರಿಯುವ ಲಕ್ಷಣ ಗೋಚರಿಸುತ್ತಿವೆ.

ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಆದರೆ, ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗಿಗೆ ಈ ಬಾರಿಯೂ ಬೆಲೆ ಸಿಕ್ಕಿಲ್ಲ. ಜಿಲ್ಲಾಡಳಿತದ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 7,30,184 ಮತದಾರರು ಇದ್ದಾರೆ. ಇದರಲ್ಲಿ 3,59,078 ಮಹಿಳಾ ಮತದಾರರು ಇದ್ದಾರೆ. ಆದರೂ, ಜಿಲ್ಲೆಯ ಯಾವುದಾರರು ಒಂದು ವಿಧಾನಸಭಾ ಕ್ಷೇತ್ರವನ್ನು ಮಹಿಳೆಯರಿಗೆ ಬಿಟ್ಟುಕೊಡುವ ಪ್ರಯತ್ನ ಯಾವುದೇ ರಾಜಕೀಯ ಪಕ್ಷಗಳಿಂದ ನಡೆದಿಲ್ಲ ಎಂಬುದು ಪ್ರಜ್ಞಾವಂತರ ದೂರು.

1952ರಿಂದ 2008ರವರೆಗಿನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ನೋಡಿದರೆ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ವೇದ್ಯವಾಗುತ್ತದೆ. 6 ದಶಕದಲ್ಲಿ ಜಿಲ್ಲೆಯಿಂದ ಶಾಸನಸಭೆಗೆ ಆಯ್ಕೆಯಾಗಿರುವ ಮಹಿಳೆಯರ ಸಂಖ್ಯೆ 3 ದಾಟಿಲ್ಲ. ಈ ಅಂಕಿ-ಅಂಶ ಅವಲೋಕಿಸಿದರೆ ಜಿಲ್ಲೆಯಲ್ಲಿ ಸ್ತ್ರೀಯರು ರಾಜಕೀಯವಾಗಿ ಇಂದಿಗೂ ಕೆಳಸ್ತರದಲ್ಲಿರುವುದು ಗೋಚರಿಸುತ್ತದೆ.

ರಾಜ್ಯ ವಿಧಾನಸಭೆಗೆ ಒಟ್ಟು 13 ಚುನಾವಣೆ ನಡೆದಿವೆ. ಇಷ್ಟು ಚುನಾವಣೆಯಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಸಂತೇಮರಹಳ್ಳಿ ಕ್ಷೇತ್ರ ಹಾಗೂ ಹಾಲಿ 4 ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳೆಯರ ಸಂಖ್ಯೆ ಕೇವಲ 11. ಜಿಲ್ಲೆಯಲ್ಲಿ ಮಹಿಳೆಯರನ್ನು ರಾಜಕೀಯವಾಗಿ ಕಡೆಗಣಿಸಿರು ವುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿಯಾಗಿವೆ.

1952ರ ಪ್ರಥಮ ಚುನಾವಣೆ ವೇಳೆ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಿದ್ದವು. ಆದರೆ, ಒಬ್ಬ ಮಹಿಳಾ ಅಭ್ಯರ್ಥಿ ಕೂಡ ಕಣಕ್ಕೆ ಇಳಿದಿರಲಿಲ್ಲ. 1957ರ ಚುನಾವಣೆಯಲ್ಲಿ ಕೊಳ್ಳೇಗಾಲ ದ್ವಿಸದಸ್ಯ ಕ್ಷೇತ್ರವಾಗಿತ್ತು. ಆಗ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ಕೆಂಪಮ್ಮ(ಕಾಂಗ್ರೆಸ್) ಪರಿಶಿಷ್ಟ ಜಾತಿ ವಿಭಾಗದಿಂದ ಆಯ್ಕೆಯಾಗಿ ಶಾಸನಸಭೆ ಪ್ರವೇಶಿಸಿದರು. ಆ ಮೂಲಕ ಜಿಲ್ಲೆಯ ಪ್ರಥಮ ದಲಿತ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಗುಂಡ್ಲುಪೇಟೆ ಕ್ಷೇತ್ರದಿಂದಲೇ 1957ರ ಚುನಾವಣೆ ಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕೆ.ಎಸ್. ನಾಗರತ್ನಮ್ಮ ಮೊದಲ ಬಾರಿಗೆ ಜಯಭೇರಿ ಬಾರಿಸಿ ವಿಧಾನಸಭೆ ಪ್ರವೇಶಿಸಿದರು. ನಂತರ, 1962, 1967, 1972ರ ಚುನಾವಣೆಯಲ್ಲೂ ಜಯಗಳಿಸಿ ಶಾಸನಸಭೆ ಪ್ರವೇಶಿಸಿದರು. 1983, 1985 ಹಾಗೂ 1989ರ ಚುನಾವಣೆಯಲ್ಲೂ ನಾಗರತ್ನಮ್ಮ ಗೆಲುವಿನ ನಗೆ ಬೀರಿದರು. ರಾಜ್ಯ ವಿಧಾನಸಭೆಯ ಪ್ರಥಮ ಮಹಿಳಾ ಸಭಾಧ್ಯಕ್ಷೆಯಾಗಿ 1972ರಿಂದ 78ರವರೆಗೆ ಉತ್ತಮ ಸೇವೆ ಸಲ್ಲಿಸಿದರು. 7 ಬಾರಿ ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಗಡಿ ಜಿಲ್ಲೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

ನಾಗರತ್ನಮ್ಮ ಅವರನ್ನು ಹೊರತುಪಡಿಸಿದರೆ 1957ರಿಂದ 1989ರ ಚುನಾವಣೆವರೆಗೆ ಒಬ್ಬ ಮಹಿಳಾ ಅಭ್ಯರ್ಥಿ ಕೂಡ ಯಾವುದೇ ರಾಜಕೀಯ ಪಕ್ಷ ಅಥವಾ ಪಕ್ಷೇತರಾಗಿ ನಾಮಪತ್ರ ಸಲ್ಲಿಸಿಲ್ಲ. 1994ರ ಚುನಾವಣೆ ಯಲ್ಲಿ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಪುನಃ ಕೆಂಪಮ್ಮ (ಕಾಂಗ್ರೆಸ್) ಕಣಕ್ಕೆ ಇಳಿದರು. ಆದರೆ, 10,185 ಮತ ಪಡೆದು ಸೋಲುಂಡರು. ಇದೇ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಡಾ.ಗಿರಿಜಾ ಮಹೇಶನ್(ಬಿಜೆಪಿ) ಹಾಗೂ ಸರೋಜಾ ಶಂಕರ್(ಪಕ್ಷೇತರ) ಅದೃಷ್ಟ ಪರೀಕ್ಷೆಗೆ ಇಳಿದು ಸೋಲು ಕಂಡರು. ಸಂತೇಮರಹಳ್ಳಿ ಮೀಸಲು ಕ್ಷೇತ್ರದಿಂದಲೂ ದೇವನೂರು ಮಹದೇವಮ್ಮ ಹಾಗೂ ಎಸ್.ಎಸ್. ಮಾಲತಿ(ಇಬ್ಬರು ಪಕ್ಷೇತರ) ಅದೃಷ್ಟ ಪರೀಕ್ಷೆಗೆ ಇಳಿದು ಸೋಲು ಅನುಭವಿಸಿದರು.

1999ರ ಚುನಾವಣೆಯಲ್ಲೂ ಒಬ್ಬ ಮಹಿಳೆ ಕೂಡ ಚುನಾವಣೆಗೆ ಸ್ಪರ್ಧಿಸಲಿಲ್ಲ. 2004ರಲ್ಲಿ ಹನೂರು ಕ್ಷೇತ್ರದಿಂದ ಪರಿಮಳಾ ನಾಗಪ್ಪ(ಜೆಡಿಎಸ್) ಸ್ಪರ್ಧಿಸಿ ಜಯಗಳಿಸಿದರು. ಸಂತೇಮರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೇಮಾವತಿ(ಬಿಜೆಪಿ) ಸೋಲು ಅನುಭವಿಸಿದರು. ಚಾಮರಾಜನಗರ ಕ್ಷೇತ್ರದಿಂದ ಡಾ.ಬಿ.ಪಿ. ಮಂಜುಳಾ (ಕಾಂಗ್ರೆಸ್) ಚುನಾವಣೆಗೆ ಸ್ಪರ್ಧಿಸಿದರು. ಪ್ರಬಲ ಪೈಪೋಟಿ ನೀಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

2008ರ ಚುನಾವಣೆಯಲ್ಲಿ ಹನೂರು ಕ್ಷೇತ್ರ ಹೊರತು ಪಡಿಸಿದರೆ ಜಿಲ್ಲೆಯ ಉಳಿದ ಯಾವುದೇ ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿಲ್ಲ. ಹನೂರು ಕ್ಷೇತ್ರದಿಂದ ಪುನರಾಯ್ಕೆ ಬಯಸಿದ ಪರಿಮಳಾ ನಾಗಪ್ಪ ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿ ಸೋಲುಕಂಡರು. ಉಳಿದಂತೆ ಇದೇ ಕ್ಷೇತ್ರದಿಂದ ರೇಷ್ಮಾಬಾನು(ಪಕ್ಷೇತರ) ಹಾಗೂ ಲಕ್ಷ್ಮೀ(ಎಸ್‌ಪಿ) ಅದೃಷ್ಟ ಪರೀಕ್ಷೆಗೆ ಇಳಿದು ಸೋಲುಂಡರು.

ಮತ್ತೆ ಹಳೇರಾಗ: ಈ ಬಾರಿಯ ಚುನಾವಣೆಯಲ್ಲೂ ಯಾವುದೇ ರಾಜಕೀಯ ಪಕ್ಷಗಳು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವ ಬಗ್ಗೆ ಭರವಸೆ ನೀಡಿಲ್ಲ.

ರಾಜಕೀಯ ಪಕ್ಷದ ವರಿಷ್ಠರ ಮನೋಧರ್ಮ ಬದಲಾಗಿಲ್ಲ. ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಗೆಲ್ಲಿಸುತ್ತೇವೆ ಎಂಬ ದೃಢ ನಿಲುವು ಪ್ರಕಟಿಸುವ ಧೈರ್ಯವೂ ಅವರಿಗೆ ಇಲ್ಲ.

ಪ್ರಸ್ತುತ ಪರಿಮಳಾ ನಾಗಪ್ಪ ಮಾತ್ರ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದು, ಸ್ವಕ್ಷೇತ್ರದಿಂದ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ. ಪಕ್ಷೇತರರಾಗಿ ಮಹಿಳಾ ಅಭ್ಯರ್ಥಿ ಗಳು ಅಖಾಡಕ್ಕೆ ಇಳಿಯುವ ಸಾಧ್ಯತೆಯಿದೆ. ಹಿಂದಿನ ಚುನಾವಣೆಗಳ ಅಂಕಿಅಂಶ ಪರಿಶೀಲಿಸಿದರೆ ಈ ಸಂಖ್ಯೆ ಎರಡಂಕಿ ದಾಟುತ್ತದೆಯೇ? ಎಂಬ ಪ್ರಶ್ನೆ ಜಿಲ್ಲೆಯ ಪ್ರಜ್ಞಾವಂತ ಮತದಾರರಿಗೆ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT