ADVERTISEMENT

ಪೌರಾಣಿಕ ನಾಟಕಕ್ಕೆ ಪ್ರೋತ್ಸಾಹ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 8:55 IST
Last Updated 17 ಜನವರಿ 2012, 8:55 IST

ಚಾಮರಾಜನಗರ: `ಪೌರಾಣಿಕ ನಾಟಕ ಕಲೆ ಗ್ರಾಮೀಣ ಭಾಗದಲ್ಲಿ ನಶಿಸುವ ಹಂತ ತಲುಪುತ್ತಿದೆ~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ. ರಾಜೇಶ್ವರಿ ವಿಷಾದಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಗ್ರಾಮೀಣ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ಗ್ರಾಮೀಣ ಸೊಗಡು ಬಿಂಬಿಸುವ ಕಲೆಗಳು ನಶಿಸುತ್ತಿವೆ. ಇವುಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ. ರಾಜ್ಯ ಸರ್ಕಾರ ನಾಟಕ ಕಲಾವಿದರಿಗೆ ಮಾಸಾಶನ ನೀಡಬೇಕು. ಜತೆಗೆ, ನಾಟಕ ಪ್ರದರ್ಶನಕ್ಕೂ ಆರ್ಥಿಕ ನೆರವು ನೀಡಬೇಕು. ಆಗ ಮಾತ್ರ ಕಲೆ ಉಳಿಸಲು ಸಾಧ್ಯ~ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾ ಚಂದ್ರು ಮಾತ ನಾಡಿ, `ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಲಾವಿದರಿದ್ದಾರೆ. ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ~ ಎಂದು ಹೇಳಿದರು.

ಸಿನಿಮಾ ಮಾಧ್ಯಮದ ಭರಾಟೆಯಿಂದಾಗಿ ಗ್ರಾಮೀಣ ಕಲೆಗಳಿಗೆ ಕಂಟಕ ಎದುರಾಗಿದೆ. ಮನರಂಜನೆಗಾಗಿ ನಾವೆಲ್ಲರೂ ಸಿನಿಮಾಕ್ಕೆ ಮೊರೆಹೋಗಿದ್ದೇವೆ. ಹೀಗಾಗಿ, ಹಳ್ಳಿಗಳಲ್ಲೂ ಪೌರಾಣಿಕ ನಾಟಕ ಪ್ರದರ್ಶನ ಕಡಿಮೆಯಾಗುತ್ತಿದೆ. ಇದು ಆತಂಕಕಾರಿ ಸಂಗತಿ ಎಂದರು.

ಕುಟುಂಬದ ಸದಸ್ಯರು ಒಟ್ಟಾಗಿ ಕುಳಿತು ನೋಡುವಂತಹ ಸಿನಿಮಾಗಳು ಬರುತ್ತಿಲ್ಲ. ಪೌರಾಣಿಕ ನಾಟಕಗಳನ್ನು ಎಲ್ಲರೂ ಕುಳಿತು ವೀಕ್ಷಿಸಬಹುದು. ನಾಟಕ ಸಾರುವ ಸಂದೇಶವನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳಬಹುದು ಎಂದ ಅವರು, ಹಿರಿಯರು ಹಾಗೂ ಕಿರಿಯರು ಎಂಬ ಭೇದಭಾವ ಇಲ್ಲದೆ ಎಲ್ಲರೂ ನಾಟಕ ಕಲೆ ಉಳಿಸಬೇಕಿದೆ. ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ಒತ್ತಾಯಿಸಿದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ ಮಾತನಾಡಿ, `ಜಿಲ್ಲೆಯಲ್ಲಿ ಸುಸಜ್ಜಿತ ರಂಗಮಂದಿರದ ಕೊರತೆಯಿದೆ. ಇದರ ಪರಿಣಾಮ ನಾಟಕ ಪ್ರದರ್ಶನಕ್ಕೆ ತೊಡಕಾಗಿದೆ~ ಎಂದರು.
ಪ್ರಸ್ತುತ ರಂಗಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡರೆ ರಂಗ ಚಟುವಟಿಕೆ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಂತೇಮರಹಳ್ಳಿಯ ಶ್ರೀಬಸವೇಶ್ವರ ಕಲಾ ತಂಡದ ಸದಸ್ಯರು `ದಕ್ಷಯಜ್ಞ~ ನಾಟಕ ಪ್ರದರ್ಶಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.