ADVERTISEMENT

ಬಾಂಬ್ ದಾಳಿಗೆ ಖಂಡನೆ: ವಕೀಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 9:45 IST
Last Updated 9 ಸೆಪ್ಟೆಂಬರ್ 2011, 9:45 IST

ಚಾಮರಾಜನಗರ: ದೆಹಲಿ ಹೈಕೋರ್ಟ್ ಆವರಣದಲ್ಲಿ ಉಗ್ರರು ನಡೆಸಿದ ಬಾಂಬ್ ಸ್ಫೋಟದ ಕೃತ್ಯ ಖಂಡಿಸಿ ನಗರದಲ್ಲಿ ಗುರುವಾರ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಚಾಮರಾಜನಗರ ವಕೀಲರ ಸಂಘದ ನೇತೃತ್ವದಡಿ ಕಲಾಪ ಬಹಿಷ್ಕರಿಸಿದ ವಕೀಲರು, ಕೂಡಲೇ ಉಗ್ರರನ್ನು ಪತ್ತೆಹಚ್ಚಿ ಬಂಧಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದೆ. ನ್ಯಾಯಾಲಯ, ಸಂಸತ್ ಆವರಣದಲ್ಲೂ ಬಾಂಬ್ ಸ್ಫೋಟಿಸಿ ಜನರ ಸಾವು, ನೋವಿಗೆ ಕಾರಣರಾಗಿದ್ದಾರೆ. ಅಮಾನುಷ ಕೃತ್ಯ ನಡೆಸುವವರನ್ನು ಪತ್ತೆಹಚ್ಚಬೇಕು. ಜನರಲ್ಲಿ ಭೀತಿ ಉಂಟು ಮಾಡಿ ದೇಶದ ಆಂತರಿಕ ಭದ್ರತೆಗೆ ಗಂಡಾಂತರ ತರುತ್ತಿರುವ ಉಗ್ರರನ್ನು ಸೆದೆಬಡಿಯಲು ಕೇಂದ್ರ ಸರ್ಕಾರ ದಿಟ್ಟಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭಾರತದಲ್ಲಿ ಭಯೋತ್ಪಾದನೆ ಬೇರುಬಿಟ್ಟಿದೆ. ಇದರಿಂದ ಜನರು ಭಯದಿಂದ ಬದುಕು ಸವೆಸು ವಂತಾಗಿದೆ. ಉಗ್ರರು ಧರ್ಮದ ಹೆಸರಿನಡಿ ಭಯೋತ್ಪಾದನೆಗೆ ಮುಂದಾಗಿದ್ದಾರೆ. ಆ ಮೂಲಕ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಜಾತ್ಯತೀತ ರಾಷ್ಟ್ರದಲ್ಲಿ ಶಾಂತಿ ಭಂಗ ಮಾಡುತ್ತಿದ್ದು, ಸರ್ವಧರ್ಮದ ಸಹಬಾಳ್ವೆಗೆ ಕಂಟಕ ತರುತ್ತಿದ್ದಾರೆ ಎಂದು ದೂರಿದರು.

ಕೂಡಲೇ, ದೆಹಲಿ ಹೈಕೋರ್ಟ್ ಮೇಲೆ ನಡೆದ ಬಾಂಬ್ ದಾಳಿ ಪ್ರಕರಣದಲ್ಲಿ ಭಾಗಿಯಾಗುವ ಉಗ್ರರನ್ನು ಬಂಧಿಸಬೇಕು. ದೇಶದಲ್ಲಿ ಸಂಪೂರ್ಣವಾಗಿ ಭಯೋತ್ಪಾದನೆಯ ನಿರ್ಮೂಲನೆಗೆ ಕೇಂದ್ರ ಸರ್ಕಾರ ಮುಂದಾಗಬೇಕು. ಕೋರ್ಟ್ ಆವರಣಗಳಲ್ಲಿ ಬಿಗಿಭದ್ರತೆ ಹೆಚ್ಚಿಸಿ ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಕಕ್ಷಿದಾರರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಬಾಂಬ್ ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಉಗ್ರರ ದಾಳಿ ಬಗ್ಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಉಪಾಧ್ಯಕ್ಷ ಶಿವರಾಮು, ಲೋಕೇಶ್, ಸಂತೋಷ್‌ಕುಮಾರ್, ಚಿನ್ನಸ್ವಾಮಿ, ಕುಮಾರ್, ಪುಟ್ಟರಾಜು, ಶಿವಸ್ವಾಮಿ, ಮಮತಾ, ಮೋಹನ್‌ಬಾಬು, ಶ್ರೀನಿವಾಸಮೂರ್ತಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.